ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸರ್ಕಾರ ಬಹುಮತ ಕಳೆದುಕೊಂಡಿರುವುದು ಖಚಿತವಾಗಿದೆ. 39 ಶಾಸಕರು ಸರ್ಕಾರಕ್ಕೆ ತಾವು ನೀಡಿದ ಬೆಂಬಲವನ್ನು ಹಿಂಪಡೆದಿರುವ ಕುರಿತು ಈಗಾಗಲೇ ಸುಪ್ರೀಂ ಕೋರ್ಟಿಗೆ ತಿಳಿಸಿದ್ದು, ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರಿಗೂ ಈ ಕುರಿತು ಪತ್ರ ರವಾನಿಸುವ ಸಾಧ್ಯತೆಯಿದೆ.
ಇದರ ಮಧ್ಯೆ ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶತಾಯಗತಾಯ ಪ್ರಯತ್ನ ನಡೆಸಿದ್ದರಾದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಹೀಗಾಗಿ ವಿಧಾನಸಭೆಯಲ್ಲಿ ವಿಶ್ವಾಸ ಮತ ಯಾಚಿಸಿ ಮುಖಭಂಗ ಅನುಭವಿಸುವುದಕ್ಕಿಂತ ರಾಜೀನಾಮೆ ನೀಡುವುದೇ ಲೇಸು ಎಂಬ ತೀರ್ಮಾನಕ್ಕೆ ಅವರು ಬಂದಿದ್ದಾರೆ ಎನ್ನಲಾಗಿದೆ.
ಮಿತ್ರಪಕ್ಷ ಎನ್.ಸಿ.ಪಿ. ನಾಯಕ ಶರದ್ ಪವಾರ್ ಅವರು ಕೂಡ ಇದೇ ಸಲಹೆ ನೀಡಿದ್ದಾರೆ ಎನ್ನಲಾಗಿದ್ದು, ಹೀಗಾಗಿ ಉದ್ಧವ್ ಠಾಕ್ರೆ ಇಂದು ಸಂಜೆಯೊಳಗಾಗಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಸಾಧ್ಯತೆಯಿದೆ. ಆದರೆ ಅದಕ್ಕೂ ಮುನ್ನ ಬಂಡಾಯ ಸಾರಿರುವ ಶಾಸಕರಿಗೆ ಬಿಸಿ ಮುಟ್ಟಿಸಬೇಕೆಂಬ ತೀರ್ಮಾನಕ್ಕೆ ಬಂದಿರುವ ಅವರು ಅನರ್ಹಗೊಳಿಸಲು ಯತ್ನಿಸುತ್ತಿದ್ದಾರೆ. ಆದರೆ ಇದು ಸುಪ್ರೀಂ ಕೋರ್ಟ್ ತೀರ್ಪಿನ ಮೇಲೆ ಅವಲಂಬಿಸಿರುವುದರಿಂದ ಕಾದುನೋಡಬೇಕಿದೆ.