ಬಂಗಾಳ ಕೊಲ್ಲಿಯಲ್ಲಿ ‘ಮೋಚಾ’ ಚಂಡಮಾರುತ ಇಂದು ರಾತ್ರಿ ವೇಳೆಗೆ ತೀವ್ರ ಸ್ವರೂಪವನ್ನು ಪಡೆದುಕೊಳ್ಳಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಚಂಡಮಾರುತದಿಂದಾಗಿ ಹಲವು ರಾಜ್ಯಗಳಲ್ಲಿ ತೀವ್ರ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಬಂಗಾಳಕೊಲ್ಲಿಯಲ್ಲಿನ ಆಳವಾದ ವಾಯುಭಾರ ಕುಸಿತದಿಂದಾಗಿ ರಾತ್ರೋರಾತ್ರಿ ಚಂಡಮಾರುತ ತೀವ್ರಗೊಂಡಿದೆ. ಬಾಂಗ್ಲಾದೇಶದ ಕಾಕ್ಸ್ ಬಜಾರ್ ಮತ್ತು ಮ್ಯಾನ್ಮಾರ್‌ನ ಸಿಟ್ವೆ ನಡುವೆ ಭೂಕುಸಿತವಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಬೆಳಗ್ಗೆ ಮೋಚಾ ಚಂಡಮಾರುತವು ಪೋರ್ಟ್ ಬ್ಲೇರ್‌ನಿಂದ ನೈಋತ್ಯಕ್ಕೆ 510 ಕಿಮೀ ದೂರದಲ್ಲಿತ್ತು. ರಾತ್ರಿ ವೇಳೆಗೆ ತೀವ್ರತೆ ಪಡೆದುಕೊಳ್ಳುವ ಸಾಧ್ಯತೆಯಿದೆ.
ಮೇ 13ರ ಸಂಜೆ ಗರಿಷ್ಠ ತೀವ್ರತೆಯನ್ನು ತಲುಪುತ್ತದೆ ಇಲಾಖೆ ತಿಳಿಸಿದೆ. ಮೇ 14ರ ಬೆಳಿಗ್ಗೆಯಿಂದ ಚಂಡಮಾರುತ ಸ್ವಲ್ಪ ದುರ್ಬಲಗೊಳ್ಳುವ ಸಾಧ್ಯತೆಯಿದೆ ಮತ್ತು ಆಗ್ನೇಯ ಬಾಂಗ್ಲಾದೇಶ, ಉತ್ತರ ಮ್ಯಾನ್ಮಾರ್ ಕರಾವಳಿಯಲ್ಲಿ ವೇಗವಾದ ಗಾಳಿ ಬೀಸಲಿದೆ. ಹವಾಮಾನ ಇಲಾಖೆಯ ಮುನ್ಸೂಚನೆಯ ಹಿನ್ನೆಲೆಯಲ್ಲಿ ಭಾರತೀಯ ಕರಾವಳಿಯಲ್ಲಿ ಹೈ ಅಲರ್ಟ್ ಮಾಡಲಾಗಿದೆ. ಕರಾವಳಿ ಪಡೆ ಚಂಡಮಾರುತವನ್ನು ಎದುರಿಸಲು ಸಿದ್ಧತೆ ಮಾಡಿಕೊಂಡಿದೆ. ಈಗಾಗಲೇ ಮೀನುಗಾರರಿಗೆ ಎಚ್ಚರಿಕೆಗಳನ್ನು ನೀಡಲಾಗಿದೆ.
ಮೋಚಾ ಚಂಡಮಾರುತದ ಹೊರತಾಗಿಯೂ ಕೋಲ್ಕತ್ತಾದಲ್ಲಿ ಶಾಖದ ಅಲೆ ಇರಲಿದೆ. ಕೋಲ್ಕತ್ತಾ ಸೇರಿದಂತೆ ಬಂಗಾಳದ ದಕ್ಷಿಣ ಜಿಲ್ಲೆಗಳಲ್ಲಿ ಹೀಟ್ ವೇವ್ ಪ್ರಭಾವ ಹೆಚ್ಚಾಗಿ ಇರಲಿದೆ. ಮೋಚಾ ಚಂಡಮಾರುತವು ಆಗ್ನೇಯ ಬಾಂಗ್ಲಾದೇಶ ಮತ್ತು ಉತ್ತರ ಮ್ಯಾನ್ಮಾರ್ ಕಡೆಗೆ ಸಾಗುತ್ತಿದೆಯಾದರೂ, ಬಂಗಾಳಕ್ಕೆ ಮಳೆ ತರುವ ಸಾಧ್ಯತೆಗಳು ಕಡಿಮೆ. ಮೋಚಾ ಚಂಡಮಾರುತದ ಅಬ್ಬರದಿಂದಾಗಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ. ಭಾರತದ ವಿವಿಧೆಡೆ ಕೂಡ ಮಳೆಯ ಮುನ್ನೆಚ್ಚರಿಕೆ ನೀಡಲಾಗಿದೆ.