alex Certify BIG NEWS: ಇಂಥ ವ್ಯಕ್ತಿ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆಗೆ ಸರ್ಕಾರ ನಿರ್ಧರಿಸಿದ್ದೇ ಮೊದಲ ತಪ್ಪು; ಸಿಎಂಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ದೇವೇಗೌಡರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಇಂಥ ವ್ಯಕ್ತಿ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆಗೆ ಸರ್ಕಾರ ನಿರ್ಧರಿಸಿದ್ದೇ ಮೊದಲ ತಪ್ಪು; ಸಿಎಂಗೆ ಪತ್ರ ಬರೆದು ಅಸಮಾಧಾನ ವ್ಯಕ್ತಪಡಿಸಿದ ಮಾಜಿ ಪ್ರಧಾನಿ ದೇವೇಗೌಡರು

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದು, ಮರು ಪರಿಷ್ಕರಣೆಗೊಂಡ ಪುಸ್ತಕವನ್ನು ಹಿಂಪಡೆಯುವಂತೆ ಆಗ್ರಹಿಸಿದ್ದಾರೆ.

ಪಠ್ಯ ಪುಸ್ತಕಗಳ ಮರು ಪರಿಷ್ಕರಣೆಗೆ ನೇಮಿಸಿದ ಸಮಿತಿಯ ಅಧ್ಯಕ್ಷರು ರಾಷ್ಟ್ರಕವಿ ಕುವೆಂಪು ವಿರಚಿತ ನಾಡಗೀತೆಗೆ ಅವಮಾನ ಮಾಡಿದ್ದಾರೆ. ನಾಡಗೀತೆಯನ್ನು ಅಸಭ್ಯವಾಗಿ ತಿರುಚಿದವರಿಗೆ ಬಹುಮಾನ ನೀಡುತ್ತೇವೆ ಎಂದು ಹೇಳಿದ್ದು, ನಾಡಧ್ವಜವನ್ನು ಒಳ ಉಡುಪಿಗೆ ಹೋಲಿಸಿದ್ದು, ನಾಡ ಅಸ್ಮಿತೆಗೆ ಮಾಡಿದ ಅವಮಾನ. ಜತೆಗೆ ಡಾ.ಅಂಬೇಡ್ಕರ್ ಅವರನ್ನೂ ಹಂಗಿಸಿದ್ದಾರೆ. ಇಂಥ ವ್ಯಕ್ತಿಯ ಅಧ್ಯಕ್ಷತೆಯಲ್ಲಿ ಪಠ್ಯ ಪುಸ್ತಕ ಪರಿಷ್ಕರಣೆಗೆ ಸರ್ಕಾರ ನಿರ್ಧರಿಸಿದ್ದೇ ಮೊದಲ ತಪ್ಪು ಎಂದು ಪತ್ರದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮರು ಪರಿಷ್ಕರಣೆಯಲ್ಲಿ ಮಾಡಿರುವ ತಪ್ಪುಗಳಂತು ಅಸಂಖ್ಯಾತ. ಸಮಾಜ ವಿಜ್ಞಾನ ಪಠ್ಯಪುಸ್ತಕದ ಏಕೀಕರಣ ಪಾಠದಿಂದ ಕುವೆಂಪು ಅವರ ಭಾವಚಿತ್ರವನ್ನು ತೆಗೆದು ಹಾಕಲಾಗಿದೆ. ಬಸವಣ್ಣನವರ ಚಳುವಳಿಯ ಆಶಯವುಳ್ಳ ಭಾಗಗಳನ್ನು ಕೈಬಿಡಲಾಗಿದೆ. ಸಿದ್ಧಗಂಗಾ, ಆದಿಚುಂಚನಗಿರಿ ಶ್ರೀಗಳ ಸೇವೆಗಳನ್ನು ತೆಗೆದುಹಾಕಲಾಗಿದೆ. ಅಂಬೇಡ್ಕರ್ ಅವರಿಗೆ ಸಂವಿಧಾನ ಶಿಲ್ಪಿ ಎಂದಿದ್ದ ವಿಶೆಷಣವನ್ನು ತೆಗೆಯಲಾಗಿದೆ. ಅಕ್ಕ, ಕನಕ, ಪುರಂದರ, ಶರೀಫರಂತಹ ಮಹಾನ್ ದಾರ್ಶನಿಕ ಸಂತರ ಪಠ್ಯಗಳನ್ನೆ ತೆಗೆಯಲಾಗಿದೆ. ಕೆಂಪೇಗೌಡ, ಸುರಪುರದ ನಾಯಕರ ವಿಷಯಗಳನ್ನು ಕಡಿತಗೊಳಿಸಲಾಗಿದೆ.

ಅಂಬೇಡ್ಕರ್ ಹಾಗೂ ಕುವೆಂಪು ಸಾರಿದ ಸಾಮಾಜಿಕ ನ್ಯಾಯ, ಸಮಾನತೆ, ಜ್ಯಾತ್ಯಾತೀತತೆ ಹಾಗೂ ವಿಶ್ವಮಾನವತ್ವದ ಪರಿಕಲ್ಪನೆಗಳನ್ನು ಕಡೆಗಣಿಸಿರುವುದು ಮರು ಪರಿಷ್ಕರಣೆಯಲ್ಲಿ ಎದ್ದು ಕಾಣುತ್ತದೆ. ಪಠ್ಯಪುಸ್ತಕಗಳಲ್ಲಿನ ದೋಷ, ಅನ್ಯಾಯಗಳನ್ನು ಕೇವಲ ತಪ್ಪೋಲೆ ಅಥವಾ ಮುಖಪುಟಗಳ ಮುದ್ರಣದಿಂದ ಸರಿಪಡಿಸಲು ಸಾಧ್ಯವಿಲ್ಲ. ಆದ್ದರಿಂದ ಪುನರ್ ಪರಿಷ್ಕರಣೆಯ ಪುಸ್ತಕಗಳನ್ನು ವಾಪಸ್ ಪಡೆದು ಹಿಂದೆ ಇದ್ದ ಬರಗೂರು ರಾಮಚಂದ್ರಪ್ಪನವರ ನೇತೃತ್ವದ 27 ಸಮಿತಿಗಳು ಪರಿಷ್ಕರಿಸಿದ ಪಠ್ಯಪುಸ್ತಕಗಳನ್ನೆ ಈ ವರ್ಷ ಮುಂದುವರೆಸಬೇಕು. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ದೇವೇಗೌಡರು ಆಗ್ರಹಿಸಿದ್ದಾರೆ.

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...