ಬೆಂಗಳೂರು: ಮೇಧಾವಿ ಪಂಡಿತರೊಬ್ಬರು ಹೆಣ್ಣು ಮಕ್ಕಳಿಗೆ ಸಲಹೆ ಕೊಟ್ಟಿದ್ದನ್ನು ನೋಡಲು ಸದನಕ್ಕೆ ಹೋಗಬೇಕಾ ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ಗೈರಾಗಿರುವ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕುಮಾರಸ್ವಾಮಿ, 5 ದಿನದ ಅಧಿವೇಶನದಲ್ಲಿ ಏನು ಚರ್ಚೆಯಾಗಿದೆ ? ಟಿಎ, ಡಿಎ ಪಡೆಯಲೆಂದು ಸದನಕ್ಕೆ ಹೋಗಬೇಕಾ ? ಒಂದು ದಿನ ಭೈರತಿ ಬಸವರಾಜ್ ವಿರುದ್ಧ ಪ್ರತಿಭಟನೆ ನಡೆಸಿದರು. ಇನ್ನೊಂದು ದಿನ ತಹಶೀಲ್ದಾರ್ ವಿರುದ್ಧ ಪ್ರತಿಭಟನೆ ನಡೆಸಿದರು. ಅದನ್ನೆಲ್ಲಾ ನೋಡಲು ಹೋಗಬೇಕಾ ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಮೇಧಾವಿ ಪಂಡಿತರೊಬ್ಬರು ಸದನದಲ್ಲಿ ಹೆಣ್ಣು ಮಕ್ಕಳಿಗೆ ಸಲಹೆ ಕೊಟ್ಟಿದ್ದನ್ನು ನೋಡಲು ಸದನಕ್ಕೆ ಹೋಗಬೇಕಾ ? ಸದನದಲ್ಲಿ ರಾಜ್ಯದ ಸಮಸ್ಯೆ ಬಗ್ಗೆ ಎಷ್ಟರ ಮಟ್ಟಿಗೆ ಚರ್ಚೆಯಾಗುತ್ತಿದೆ ? ಏನು ಸಾಧನೆ ಆಗುತ್ತಿದೆ ? ನಾಳೆ ಅಥವಾ ನಾಡಿದ್ದು ಅಧಿವೇಶನಕ್ಕೆ ಹೋಗುತ್ತೇನೆ. ಸಮಯ ಸಿಕ್ಕರೆ ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.