ಇಂಡೋನೇಷ್ಯಾದ ಮುಖ್ಯ ದ್ವೀಪವಾದ ಜಾವಾದಲ್ಲಿ ಸೋಮವಾರ ಸಂಭವಿಸಿದ ಭೂಕಂಪದಲ್ಲಿ ಸಾವನ್ನಪ್ಪಿದವರ ಸಂಖ್ಯೆ 46ಕ್ಕೆ ಏರಿಕೆಯಾಗಿದೆ. ರಿಕ್ಟರ್ ಮಾಪನದಲ್ಲಿ ದಾಖಲಾದ 5.6 ತೀವ್ರತೆ ಭೂಕಂಪದಿಂದ 700 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ತೀವ್ರತರದ ಭೂಕಂಪ ಕಟ್ಟಡಗಳಿಗೆ ಹಾನಿ ಮಾಡಿದ್ದು, ಹಲವೆಡೆ ಭೂಕುಸಿತವಾಗಿದೆ.
ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ ಪ್ರಕಾರ, ಮಧ್ಯಾಹ್ನ ಭೂಕಂಪವು ಪಶ್ಚಿಮ ಜಾವಾದ ಸಿಯಾಂಜೂರ್ ಪ್ರದೇಶದಲ್ಲಿ ಕೇಂದ್ರೀಕೃತವಾಗಿತ್ತು ಮತ್ತು ರಾಜಧಾನಿ ಜಕಾರ್ತಾದವರೆಗೂ ಅದರ ತೀವ್ರತೆಯಿತ್ತು. ಭೂಕಂಪದಿಂದ ಭಯಭೀತರಾದ ಜನ ಬೀದಿಗೆ ಓಡಿಬಂದರು.
ಭೂಕಂಪದಿಂದ ಉಂಟಾದ ಬಹುಪಾಲು ಸಾವುಗಳನ್ನು ಒಂದೇ ಆಸ್ಪತ್ರೆಯಲ್ಲಿ ಎಣಿಕೆ ಮಾಡಲಾಗಿದೆ . ಕುಸಿದ ಕಟ್ಟಡಗಳ ಅವಶೇಷಗಳಡಿ ಸಿಲುಕಿ ಹೆಚ್ಚಿನ ಮಂದಿ ಸಾವನ್ನಪ್ಪಿದಾರೆ.
ಭೂಕಂಪದ ನಂತರ ಪಟ್ಟಣದ ಸಯಾಂಗ್ ಆಸ್ಪತ್ರೆಯಲ್ಲಿ ವಿದ್ಯುತ್ ಇಲ್ಲದ ಕಾರಣ ವೈದ್ಯರು ಸಂತ್ರಸ್ತರಿಗೆ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಸ್ಥಳೀಯರು ಪಿಕಪ್ ಟ್ರಕ್‌ಗಳು ಮತ್ತು ಮೋಟಾರ್‌ಬೈಕ್‌ಗಳಲ್ಲಿ ಆಸ್ಪತ್ರೆಗೆ ಸಾಗಿಸಿದರು.
ಗಾಯಾಳುಗಳನ್ನು ಮತ್ತು ಶವಗಳನ್ನು ರಸ್ತೆಯ ಮೇಲೆ ಟಾರ್ಪಲಿನ್ ಹಾಸಿ ಹಾಕಲಾಗಿತ್ತು. ಭೂಕಂಪದಲ್ಲಿ ಸಾವಿರಾರು ಮನೆಗಳು ಹಾನಿಗೊಳಗಾಗಿವೆ. ಇಂಡೋನೇಷ್ಯಾದ ಮಾಧ್ಯಮಗಳ ಪ್ರಕಾರ ಪಟ್ಟಣದಲ್ಲಿನ ಅಂಗಡಿಗಳು, ಆಸ್ಪತ್ರೆ ಮತ್ತು ಇಸ್ಲಾಮಿಕ್ ಬೋರ್ಡಿಂಗ್ ಶಾಲೆಗೆ ತೀವ್ರ ಹಾನಿಯಾಗಿದೆ.