ಇಂಡಿಯಾ ಗ್ಲೋಬಲ್ ಫೋರಮ್ ವಾರ್ಷಿಕ ಶೃಂಗಸಭೆಗೆ ಚಾಲನೆ ಸಿಕ್ಕಿದೆ. ಹೂಡಿಕೆದಾರರ ಸಂವಾದ ಮತ್ತು ಆರಂಭಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಪಿಯೂಷ್ ಗೋಯಲ್, ಜಾಗತಿಕ ವ್ಯಾಪಾರದಲ್ಲಿ ಭಾರತದ ಬೆಳವಣಿಗೆ ಮತ್ತು 3 ಅಂಶಗಳ ಮೇಲೆ ನಿರ್ಮಿಸಲಾದ ಪಾಲುದಾರಿಕೆಗಳ ಬಗ್ಗೆ ಮಾತನಾಡಿದರು.
ಸಂವೇದನಾಶೀಲತೆ, ವಿಶ್ವಾಸ ಮತ್ತು ಸಮಾಲೋಚನಾ ಘಟಕಗಳ ನಡುವಿನ ಬಲವಾದ ಬಂಧ ವ್ಯಾಪಾರದ ಮೂಲಮಂತ್ರವೆಂದು ಬಣ್ಣಿಸಿದರು.
ಇಂಡಿಯಾ ಗ್ಲೋಬಲ್ ಫೋರಮ್ (IGF) ನ ವಾರ್ಷಿಕ ಶೃಂಗಸಭೆ 2023ರ ಪೂರ್ವಭಾವಿಯಾಗಿ ಪಿಯೂಶ್ ಗೋಯಲ್ ಅವರ ಅಧ್ಯಕ್ಷತೆಯಲ್ಲಿ ವಿಶೇಷ ಹೂಡಿಕೆದಾರರ ಸಂವಾದ ಏರ್ಪಡಿಸಲಾಗಿತ್ತು. “ನಾವು ಸ್ವಾವಲಂಬಿ, ಆತ್ಮನಿರ್ಭರ ಭಾರತದ ಬಗ್ಗೆ ಮಾತನಾಡುವಾಗ ಅವಕಾಶದ ಬಾಗಿಲುಗಳನ್ನು ಮುಚ್ಚುವ ಬಗ್ಗೆ ಯೋಚಿಸುತ್ತಿಲ್ಲ, ವಾಸ್ತವವಾಗಿ ಅದನ್ನು ಮತ್ತಷ್ಟು ವಿಶಾಲವಾಗಿ ತೆರೆಯುತ್ತೇವೆʼʼ ಎಂದು ಪಿಯೂಶ್ ಗೋಯಲ್ ಹೇಳಿದರು.
ಇಡೀ ಜಗತ್ತು ನಮ್ಮೊಂದಿಗೆ ಮಾತನಾಡಲು ಬಯಸಲು ಇದೇ ಕಾರಣ. ಪ್ರತಿಯೊಂದು ದೇಶವು ಕೆಲವು ಸ್ಪರ್ಧಾತ್ಮಕ ಪ್ರಯೋಜನಗಳನ್ನು ಹೊಂದಿದೆ. ಭಾರತ ಕೂಡ ಇದನ್ನು ಪರಿಗಣಿಸುತ್ತಿದೆ. ನಮ್ಮ ಮಾರುಕಟ್ಟೆಗಳನ್ನು ಜನಪ್ರಿಯಗೊಳಿಸುವ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ಹೊಂದಲು ಬಯಸುತ್ತೇವೆ. ಮುಂಬರುವ ವರ್ಷಗಳಲ್ಲಿ ಭಾರತೀಯ ಕೈಗಾರಿಕೆಗಳು ‘ಮೊಜೊ’ವನ್ನು ಉತ್ಪಾದನಾ ಜಾಗದಲ್ಲಿ ಮರಳಿ ಪಡೆಯಲು ಸಾಧ್ಯವಾಗುತ್ತದೆ ಎಂದು ನನಗೆ ವಿಶ್ವಾಸವಿದೆ. ಪರಸ್ಪರ ಸಂಬಂಧವನ್ನು ನಂಬುವ, ನಿಯಮ-ಆಧಾರಿತ ವಿಧಾನವನ್ನು ಅನುಸರಿಸುವ ಮತ್ತು ಪಾರದರ್ಶಕತೆಯಲ್ಲಿ ವಿಶ್ವಾಸವಿಡುವ ದೇಶಗಳೊಂದಿಗೆ ವ್ಯಾಪಾರ ಮಾತುಕತೆ ನಡೆಸಲು ಬಯಸುತ್ತೇವೆʼʼ ಎಂದರು. ದೇಶದ ಪ್ರಗತಿಗಾಗಿ, ಜಗತ್ತಿನ ವೇಗಕ್ಕೆ ತಕ್ಕಂತೆ ಸಾಗಲು ಮತ್ತು ಹೆಚ್ಚು ಪ್ರಕಾಶಮಾನವಾದ ತಾಣವಾಗಿ ಹೊರಹೊಮ್ಮಲು ಭಾರತ ಸರ್ವಸನ್ನದ್ಧ ಎಂದು ಹೇಳಿದ್ರು.
ಇಂಡಿಯಾ ಗ್ಲೋಬಲ್ ಫೋರಂನ ಸಂಸ್ಥಾಪಕ ಮತ್ತು ಅಧ್ಯಕ್ಷ ಪ್ರೊ. ಮನೋಜ್ ಲಾಡ್ವಾ ಮಾತನಾಡಿ, “ಗ್ಲೋಬಲ್ ಟ್ರೇಡ್‌ನಲ್ಲಿ ಭಾರತದ ಬೆಳವಣಿಗೆ ಮತ್ತು ಫಾರ್ಮಾಸ್ಯುಟಿಕಲ್‌ಗಳಂತಹ ಕ್ಷೇತ್ರಗಳಲ್ಲಿ ತನ್ನ ಸಾಮರ್ಥ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಹೊಂದಿರುವ ಪಾಲುದಾರಿಕೆಯಿಂದ ಪ್ರಭಾವಿತನಾಗಿದ್ದೇನೆ. ಮಾಹಿತಿ ತಂತ್ರಜ್ಞಾನ ಮತ್ತು ನವೀಕರಿಸಬಹುದಾದ ಶಕ್ತಿಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಭಾರತದ ಬೆಳವಣಿಗೆ ಕುರಿತಂತೆ ಸಚಿವ ಪಿಯೂಷ್ ಗೋಯಲ್ ಕೂಡ ಅದನ್ನೇ ಪುನರುಚ್ಚರಿಸಿದ್ದಾರೆ. ಇಂಡಿಯಾ ಗ್ಲೋಬಲ್ ಫೋರಮ್ ಯಾವಾಗಲೂ ಭಾರತದ ಜಾಗತೀಕರಣದ ಕಥೆಯನ್ನು ಹೈಲೈಟ್ ಮಾಡುವ ಮತ್ತು ವರ್ಧಿಸುವ ಮೂಲಕ ಅಜೆಂಡಾವನ್ನು ಮುನ್ನಡೆಸಿದೆʼʼ ಎಂದರು.
ಈ ವರ್ಷದ IGF ವಾರ್ಷಿಕ ಶೃಂಗಸಭೆಯು ಮಾರ್ಚ್ 27 ರಂದು ನವದೆಹಲಿಯಲ್ಲಿ ನಡೆಯುತ್ತಿದೆ. ದಿ ಫೋರಮ್ ಮತ್ತು IGF ಸ್ಟುಡಿಯೋವನ್ನು ಒಳಗೊಂಡ ವಿಶಿಷ್ಟವಾದ 3-ಇನ್-1 ಸ್ವರೂಪವನ್ನು ಇದು ಹೊಂದಿದೆ. IGF ವಲಯಗಳು ಸಂಬಂಧಿತ ವಿಷಯಗಳು ಮತ್ತು ಸಮಸ್ಯೆಗಳ ಕುರಿತು 35ಕ್ಕೂ ಹೆಚ್ಚು ಚರ್ಚೆಗಳಿಗೆ ವೇದಿಕೆಯಾಗಿವೆ. ನಾಯಕತ್ವ, ಭೌಗೋಳಿಕ ರಾಜಕೀಯ, ಹವಾಮಾನ, ತಂತ್ರಜ್ಞಾನ ಸೇರಿದಂತೆ ಪ್ರಮುಖ ಜಾಗತಿಕ ವಿಷಯಗಳ ಬಗ್ಗೆ ಇಲ್ಲಿ ಚರ್ಚೆಯಾಗಲಿದೆ. IGF ಅಂತರಾಷ್ಟ್ರೀಯ ವ್ಯಾಪಾರ ಮತ್ತು ಜಾಗತಿಕ ನಾಯಕರಿಗೆ ಕಾರ್ಯಸೂಚಿ ಹೊಂದಿಸುವ ವೇದಿಕೆಯಾಗಿದೆ. ಇದು ಅಂತರರಾಷ್ಟ್ರೀಯ ಕಾರ್ಪೊರೇಟ್‌ಗಳು ಮತ್ತು ನೀತಿ ನಿರೂಪಕರ ಸಂವಹನಕ್ಕೆ ವೇದಿಕೆಯಾಗಿದೆ.