ಬೆಂಗಳೂರು: ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಕಾಂಗ್ರೆಸ್ ನಾಯಕರು ವಿಧಾನಸಭೆ ಹಾಗೂ ವಿಧಾನ ಪರಿಷತ್ ನಲ್ಲಿ ಅಹೋರಾತ್ರಿ ಧರಣಿ ನಡೆಸಿದ್ದಾರೆ. ಕೈ ನಾಯಕರು ಸದನದಲ್ಲೇ ಹಾಸಿಗೆ, ದಿಂಬು ಹಾಸಿ ಮಲಗಿದ್ದಲ್ಲದೇ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಒತ್ತಾಯಿಸಿದ್ದಾರೆ.
ಈ ವೇಳೆ ಮಾತನಾಡಿದ ಕೆ.ಪಿ.ಸಿ.ಸಿ. ಅಧ್ಯಕ್ಷ ಡಿ.ಕೆ. ಶಿವಕುಮಾರ್, ಆ ಬಚ್ಚಲು ಬಾಯಿ ಈಶ್ವರಪ್ಪ ರಾಜೀನಾಮೆ ಬೇಡ, ಅವರನ್ನು ಮೊದಲು ವಜಾಗೊಳಿಸಬೇಕು. ರಾಜೀನಾಮೆ ಎಂಬುದು ಗೌರವಯುತ ಪದ. ನಾನು ಅವರ ರಾಜೀನಾಮೆ ಕೇಳುತ್ತಿಲ್ಲ, ಸಿಎಂ ಬೊಮ್ಮಾಯಿ ಹಾಗೂ ರಾಜ್ಯಪಾಲರು ಸಚಿವರನ್ನು ವಜಾಗೊಳಿಸಿ ಕ್ರಮ ಕೈಗೊಳ್ಳಲಿ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ನಾಯಕರಿಗೆ ರಾಷ್ಟ್ರಧ್ವಜ ಎಂದರೇನು ಗೊತ್ತಿಲ್ಲ. ಅವರು ನಮ್ಮ ತಂದೆ, ತಾಯಿ ಎಂದೆಲ್ಲ ಮಾತನಾಡುತ್ತಿದ್ದಾರೆ. ನಮ್ಮ ತಂದೆ ಮೇಲಿದ್ದಾರೆ. ಇವರು ಅಲ್ಲಿಯೇ ಹೋಗಿ ಮಾತನಾಡಲಿ. ನಾವು ಯಾವುದೇ ವೈಯಕ್ತಿಕ ವಿಚಾರವಾಗಿ ಮಾತನಾಡುತ್ತಿಲ್ಲ, ಕಾಂಗ್ರೆಸ್ ನವರು ಸ್ವಾತಂತ್ರ್ಯ ತಂದುಕೊಟ್ಟಿದ್ದಕ್ಕೆ ಇಂದು ಬಿಜೆಪಿಯವರು ಸಿಎಂ ಆಗಿದ್ದಾರೆ. ಆದರೆ ರಾಷ್ಟ್ರದ್ರೋಹಿ ಕೆಲಸ ಮಾಡುತ್ತಿರುವ ಈಶ್ವರಪ್ಪರನ್ನು ಸಚಿವರನ್ನಾಗಿ ಮುಂದುವರೆಸುವುದು ಬೇಡ ಅವರನ್ನು ವಜಾಗೊಳಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇಂದು ಕೂಡ ನಮ್ಮ ಧರಣಿ ಮುಂದುವರೆಯಲಿದೆ. ಸೋಮವಾರದಿಂದ ತಾಲೂಕು ಕೇಂದ್ರ, ಜಿಲ್ಲಾ ಕೇಂದ್ರಗಳಲ್ಲೂ ರಾಷ್ಟ್ರಧ್ವಜ ಹಿಡಿದು ಕಾಂಗ್ರೆಸ್ ಕಾರ್ಯಕರ್ತರು ಹೋರಾಟ ನಡೆಸಲಿದ್ದಾರೆ ಎಂದು ಹೇಳಿದರು.