ಬೆಂಗಳೂರು: ಹೊಟ್ಟೆ ನೋವೆಂದು ಆಸ್ಪತ್ರೆಗೆ ಬಂದ ಯುವತಿಗೆ ವೈದ್ಯನೊಬ್ಬ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ಬೆಂಗಳೂರಿನ ಚಂದ್ರಾ ಲೇಔಟ್ ನ ಅರುಂಧತಿ ನಗರದಲ್ಲಿ ನಡೆದಿದೆ.
ಹೊಟ್ಟೆ ನೋವಿನಿಂದ ಬಳಲುತ್ತಿದ್ದ 19 ವರ್ಷದ ಯುವತಿ ತನ್ನ ಅಜ್ಜಿಯ ಜೊತೆ ಅರುಂಧತಿ ನಗರದಲ್ಲಿರುವ ವೈದ್ಯ ಉಬೇದುಲ್ಲ ಕ್ಲಿನಿಕ್ ಗೆ ಹೋಗಿದ್ದಳು. ಈ ವೇಳೆ ಅಜ್ಜಿಯನ್ನು ಹೊರಗೆ ಕುಳಿತುಕೊಳ್ಳುವಂತೆ ಹೇಳಿ ವೈದ್ಯ ಉಬೇದುಲ್ಲ, ಯುವತಿಗೆ ಗ್ಲೂಕೋಸ್ ಹಾಕಿಸಿ ಮಲಗಿಸಿದ್ದ. ಬಳಿಕ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಯುವತಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗ್ಲೂಕೋಸ್ ಹಾಕಿದ ಕೈಯಿಂದ ರಕ್ತಬರುತ್ತೆ. ಯಾರಿಗಾದೂ ವಿಷಯ ಬಾಯ್ಬಿಟ್ಟರೆ ಸರಿಯಿರಲ್ಲ ಎಂದು ಬೆದರಿಕೆ ಹಾಕಿದ್ದಾನೆ.
ಮನೆಗೆ ಬಂದ ಯುವತಿಗೆ ತೀವ್ರಜ್ವರ ಕಾಣಿಸಿಕೊಂಡಿದೆ. ಕುಟುಂಬದವರು ಯುವತಿಯನ್ನು ಮತ್ತದೇ ಕ್ಲಿನಿಕ್ ಗೆ ಕರೆದೊಯ್ಯಲು ಮುಂದಾದಾಗ ಯುವತಿ ಅಣ್ಣಂದಿರ ಬಳಿ ವಿಷಯ ಹೇಳಿದ್ದಾಳೆ. ಆಕ್ರೋಶಗೊಂಡ ಯುವತಿ ಅಣ್ಣಂದಿರು ಕ್ಲಿನಿಕ್ ಮೇಲೆ ದಾಳಿ ನಡೆಸಿ ಕ್ಲಿನಿಕ್ ಧ್ವಂಸಗೊಳಿಸಿದ್ದಾರೆ. ವೈದ್ಯ ಉಬೇದುಲ್ಲ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ವೈದ್ಯ ನಾಪತ್ತೆಯಾಗಿದ್ದು, ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.