ಬೆಂಗಳೂರು; ಆರೋಗ್ಯ ಸಚಿವ ಡಾ.ಸುಧಾಕರ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಅವರ ಪರವಾಗಿ ಬೇರೆ ಸಚಿವರಿಂದ ಸದನಲ್ಲಿ ಉತ್ತರಿಸಲಾಗುವುದು ಎಂದು ಆಡಳಿತ ಪಕ್ಷ ಬಿಜೆಪಿ, ಹೇಳುತ್ತಿದ್ದಂತೆ ವಿಧಾನಸಭೆಯಲ್ಲಿ ಗದ್ದಲ ಕೋಲಾಹಲಕ್ಕೆ ಕಾರಣವಾಯಿತು.
ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಪ್ರಶ್ನೋತ್ತರ ಕಲಾಪದ ವೇಳೆ ಸದಸ್ಯರ ಗೈರು ಹಾಜರಿ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕಲಾಪಕ್ಕೆ ಸರ್ಕಾರದ ಸದಸ್ಯರು, ಸಚಿವರು ಕೂಡ ಗೈರಾಗಿದ್ದು, ಉತ್ತರ ಯಾರಿಂದ ಪಡೆಯಬೇಕು ಎಂದು ಗರಂ ಆಗಿದ್ದಾರೆ.
ಈ ವೇಳೆ ಆರೋಗ್ಯ ಸಚಿವ ಡಾ. ಸುಧಾಕರ್ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗಾಗಿ ಅವರ ಅನುಪಸ್ಥಿತಿಯಲ್ಲಿ ಬೇರೆ ಸಚಿವರು ಉತ್ತರ ನೀಡುತ್ತಾರೆ ಎಂದು ಬಿಜೆಪಿ ಸದಸ್ಯರು ಹೇಳುತ್ತಿದ್ದಂತೆ ವಿಪಕ್ಷ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.
ಕಲಾಪಕ್ಕೆ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಸೇರಿದಂತೆ ಹಲವು ಸದಸ್ಯರು ಗೈರಾಗುತ್ತಿದ್ದಾರೆ. ಇದೀಗ ಆರೋಗ್ಯ ಸಚಿವರ ಪತ್ತೆಯೂ ಇಲ್ಲ. ನಮಗೆ ಬೇರೆ ಸಚಿವರು ಕಾಟಾಚಾರದ ಉತ್ತರ ಕೊಡುವುದು ಬೇಡ ಎಂದು ಗದ್ದಲ ಆರಂಭಿಸಿದರು. ಈ ವೇಳೆ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಆರೋಪ – ಪ್ರತ್ಯಾರೋಪಗಳು ನಡೆದಿದ್ದು, ಕೆಲ ಕಾಲ ಸದನದಲ್ಲಿ ಕೋಲಾಹಲದ ಪ್ರಸಂಗವೂ ನಡೆಯಿತು.