ಬೆಂಗಳೂರು: ಪಾಗಲ್ ಪ್ರೇಮಿ ಹುಚ್ಚಾಟಕ್ಕೆ ಆಸಿಡ್ ದಾಳಿಗೊಳಗಾದ ಯುವತಿಯ ಸ್ಥಿತಿ ಗಂಭೀರವಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೇರೊಂದು ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ ಎಂದು ತಿಳಿದುಬಂದಿದೆ.
ಬೆಂಗಳೂರಿನ ಸುಂಕದ ಕಟ್ಟೆ ಬಳಿ ಆಫೀಸಿಗೆ ಹೋಗಲೆಂದು ಬಸ್ ಗಾಗಿ ಕಾಯುತ್ತಿದ್ದ ಯುವತಿ ಮೇಲೆ ಪಾಗಲ್ ಪ್ರೇಮಿ ನಾಗೇಶ್ ಎಂಬಾತ ಆಸಿಡ್ ದಾಳಿ ನಡೆಸಿ ಪರಾರಿಯಾಗಿದ್ದಾನೆ. 23 ವರ್ಷದ ಯುವತಿ ಮುತ್ತೂಟ್ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದಳು.
ನಾಗೇಶ್ ಹಲವು ದಿನಗಳಿಂದ ಯುವತಿಯ ಹಿಂದೆ ಬಿದ್ದು, ತನ್ನನ್ನು ಪ್ರೀತಿಸುವಂತೆ ಬಲವಂತ ಮಾಡುತ್ತಿದ್ದ. ಇದಕ್ಕೆ ಯುವತಿ ನಿರಾಕರಿಸಿದ್ದಳು, ಇಂದು ನಡು ರಸ್ತೆಯಲ್ಲೇ ನಾಗೇಶ್ ಯುವತಿ ಮೇಲೆ ಆಸಿಡ್ ದಾಳಿ ನಡೆಸಿದ್ದಾನೆ.
ಈ ಬಗ್ಗೆ ಮಾಹಿತಿ ನೀಡಿರುವ ಪಶ್ಚಿಮ ವಿಭಾಗ ಡಿಸಿಪಿ ಸಂಜೀವ್ ಪಾಟೀಲ್, ಯುವತಿಯ ಬೆನ್ನು, ಕತ್ತು, ತಲೆಯ ಭಾಗಕ್ಕೆ ಗಾಯಗಳಾಗಿದ್ದು, ಯುವತಿಯ ಸ್ಥಿತಿ ಗಂಭೀರವಾಗಿದೆ. ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿದ್ದು ಯುವತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಸ್ಥಳಾಂತರಿಸಲು ಸಿದ್ಧತೆ ನಡೆದಿದೆ. ಆರೋಪಿ ಪತ್ತೆಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ ಎಂದರು.