ಬೆಂಗಳೂರಿನ ಮುತ್ತೂಟ್ ಮಿನಿ ಫೈನಾನ್ಸ್ ನಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಮೇಲೆ ಆಸಿಡ್ ಎರಚಿ ಪರಾರಿಯಾಗಿರುವ ನಾಗೇಶ್ ಬಾಬು ಎಂಬಾತನನ್ನು ನೂರಾರು ಪೊಲೀಸರು ಈಗಲೂ ಹುಡುಕುತ್ತಿದ್ದಾರೆ. ಆದರೆ ಆರೋಪಿ ಈವರೆಗೆ ಪತ್ತೆಯಾಗಿಲ್ಲ.
ಘಟನೆ ನಡೆದ ದಿನದಂದು ಮೆಜೆಸ್ಟಿಕ್ ವರೆಗೆ ಬೈಕಿನಲ್ಲಿ ಬಂದ ಆರೋಪಿ, ಆ ಬಳಿಕ ಪಾರ್ಕಿಂಗ್ ನಲ್ಲಿ ಬೈಕ್ ನಿಲ್ಲಿಸಿ ಹೋಗಿದ್ದಾನೆ. ಆತ ತನ್ನ ಬಳಿಯಿದ್ದ ಮೊಬೈಲನ್ನು ಮಾರ್ಗ ಮಧ್ಯದಲ್ಲಿ ಬಿಸಾಡಿದ್ದು, ಯಾವುದೇ ಮೊಬೈಲ್ ಬಳಸುತ್ತಿಲ್ಲವೆನ್ನಲಾಗಿದೆ.
ಕುಟುಂಬ ಸದಸ್ಯರು, ಸ್ನೇಹಿತರನ್ನು ಸಹ ಆರೋಪಿ ನಾಗೇಶ್ ಸಂಪರ್ಕ ಮಾಡದಿರುವ ಕಾರಣ ಪೊಲೀಸರಿಗೆ ಆತನ ಸುಳಿವು ಲಭ್ಯವಾಗುತ್ತಿಲ್ಲ. ನಾಗೇಶ್ ತನ್ನ ಚಹರೆಯನ್ನು ಬದಲಿಸಿಕೊಂಡಿರಬಹುದೆಂಬ ಅನುಮಾನ ಹೊಂದಿರುವ ಪೊಲೀಸರು ಇದೀಗ ಆತನ ವಿವಿಧ ಚಹರೆ ಹೊಂದಿರುವ ಫೋಟೋಗಳನ್ನು ಬಿಡುಗಡೆ ಮಾಡಿದ್ದಾರೆ.
ತಲೆ ಸಂಪೂರ್ಣವಾಗಿ ಬೋಳಿಸಿರುವ, ಗಡ್ಡ ಮೀಸೆ ಬಿಟ್ಟಿರುವ, ತಲೆ ಬೋಳಿಸಿ ಮೀಸೆ, ಗಡ್ಡ ಬಿಟ್ಟಿರುವ ಫೋಟೋಗಳನ್ನು ಬಿಡುಗಡೆಗೊಳಿಸಿದ್ದು ಆರೋಪಿ ಪತ್ತೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ನಾಗೇಶ್ ನೆರೆ ರಾಜ್ಯದಲ್ಲಿ ತಲೆಮರೆಸಿಕೊಂಡಿರಬಹುದು ಎಂಬ ಅನುಮಾನ ಪೊಲೀಸರಿಗಿದ್ದು, ಹೀಗಾಗಿ ಅಲ್ಲಿಯೂ ಸಹ ಕಾರ್ಯಾಚರಣೆ ನಡೆಸಿದ್ದಾರೆ.