ರಾಮನಗರ: ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ನನ್ನ ಕ್ಷೇತ್ರಕ್ಕೆ ಬರಲು ಇವರ ಅನುಮತಿ ಪಡೆದುಕೊಳ್ಳಬೇಕೆ? ರಾಮನಗರಕ್ಕೆ ನಾನು ಕೊಟ್ಟಿರುವ ಕೊಡುಗೆ ಸಾಕಷ್ಟಿದೆ ಎಂದು ಗುಡುಗಿದ್ದಾರೆ.
ರಾಮನಗರದ ಅವ್ವೇರಹಳ್ಳಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ಆಲಿಬಾಬಾ 40 ಮಂದಿ ಕಳ್ಳರು ಅಂತಾರಲ್ಲ ಹಾಗೆ ಇವರೆಲ್ಲರೂ ಆವರಿಸಿಕೊಂಡಿದ್ದಾರೆ. ಜನರಿಗೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ರಕ್ಷಣೆಗಾಗಿ ನಾನು ಬಂದಿದ್ದೇನೆ. ನಾವೇನು ಯಾರ ಆಸ್ತಿ ಲೂಟಿ ಮಾಡಲು ಬಂದಿಲ್ಲ. ಯಾರ್ಯಾರ ಜಮೀನನ್ನು ಯೋಗೇಶ್ವರ್ ಬರೆಸಿಕೊಂಡಿದ್ದಾರೆ ಎಂದು ಗೊತ್ತಿದೆ. ಸುಳ್ಳು ದಾಖಲೆ ಸೃಷ್ಟಿಸಿ ಜಮೀನು ಬರೆಸಿಕೊಂಡಿದ್ದಾರೆ. ಎಷ್ಟು ದಾಖಲೆ ಬೇಕು ಹೇಳಿ? ವಿಧಾನಸೌಧದಲ್ಲಿ ಕೆಲ ದಾಖಲೆಗಳನ್ನು ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.
ಪತಿಯನ್ನು ತೊರೆದರೂ ಮಕ್ಕಳ ಜವಾಬ್ದಾರಿ ಹೊತ್ತಿದ್ದಾರೆ ಈ ನಟಿಯರು..!
ಇದೇ ವೇಳೆ ಸಂಸದ ಡಿ.ಕೆ. ಸುರೇಶ್ ವಿರುದ್ಧ ಏಕವಚನದಲ್ಲಿ ಕಿಡಿ ಕಾರಿದ ಕುಮಾರಸ್ವಾಮಿ, ಡಿ.ಕೆ. ಸುರೇಶ್ ನನ್ನ ಸುದ್ದಿಗೆ ಬರುವುದು ಬೇಡ, ನನಗೆ ಹೇಳಲು ಅವನು ಯಾರು? ಇವರ ಹಿನ್ನಲೆ ನನಗೆ ಗೊತ್ತಿಲ್ಲವೇ? ಕಂಡವರ ಜಮೀನು ಲೂಟಿ ಮಾಡುವುದು, ಕಿಡ್ನ್ಯಾಪ್ ಮಾಡಿಸುವುದು, ಹೆದರಿಸಿ ಸಹಿ ಹಾಕಿಸಿಕೊಳ್ಳುವುದು ಇದನ್ನೆಲ್ಲ ನಾನು ಈ ಜೀವನದಲ್ಲಿ ಮಾಡಿಲ್ಲ. ಹಣದ ದಾಹಕ್ಕೆ ಎಷ್ಟು ರೈತರ ಕುಟುಂಬ ಹಾಳು ಮಾಡಿದ್ದೀರಿ? ಭೂಮಿ ಒತ್ತುವರಿ ಮಾಡಿ, ಬಂಡೆ ಒಡೆದು ವಿದೇಶಕ್ಕೆ ಸಾಗಿಸಿದ್ದಾರೆ. ಇಂಥವರಿಂದ ನಾನು ಬುದ್ಧಿ ಕಲಿಯಬೇಕಿಲ್ಲ ಎಂದು ಗುಡುಗಿದರು.