ತುಮಕೂರು: ಕಾಂಗ್ರೆಸ್ ಕೋಮುವಾದಿ ಪಕ್ಷವಲ್ಲ, ಸಮಾಜದ ಎಲ್ಲಾ ವರ್ಗಗಳ ಜೊತೆ ನಮ್ಮ ಪಕ್ಷ ಬೆರೆಯುತ್ತದೆ ಎಂದು ಸಂಸದ ರಾಹುಲ್ ಗಾಂಧಿ ತಿಳಿಸಿದ್ದಾರೆ.
ಭಾರತ್ ಜೋಡೋ ಯಾತ್ರೆ ವೇಳೆ ತುಮಕೂರಿನಲ್ಲಿ ಸುದ್ದಿಗೋಷ್ಠಿ ನಡೆಸಿದ ರಾಹುಲ್ ಗಾಂಧಿ, ಕಾಂಗ್ರೆಸ್ ಪಕ್ಷ ಸಮಾಜದ ಯಾವುದೇ ಒಬ್ಬರ ಸಮಸ್ಯೆಯನ್ನು ಮಾತ್ರವಲ್ಲ, ಎಲ್ಲರ ಸಮಸ್ಯೆಗಳನ್ನು ಆಲಿಸುತ್ತದೆ. ಎಲ್ಲರಿಗೂ ಸ್ಪಂದಿಸುತ್ತದೆ. ಸಮಾಜದ ಎಲ್ಲರ ಏಳ್ಗೆಗಾಗಿ ಶ್ರಮಿಸುತ್ತದೆ ಎಂದರು.
ಆರ್ ಎಸ್ ಎಸ್, ಬ್ರಿಟಿಷರಿಗೆ ಸಹಾಯ ಮಾಡುತ್ತಿತ್ತು. ಸಾವರ್ಕರ್ ಬ್ರಿಟಿಷರಿಂದ ಸ್ಟೈಫಂಡ್ ಪಡೆದುಕೊಳ್ಳುತ್ತಿದ್ದರು. ಪಿಎಫ್ಐ ಸಂಘಟನೆ ನಿಷೇಧಕ್ಕೆ ನಮ್ಮ ಬೆಂಬಲವಿದೆ. ಸಮಾಜದಲ್ಲಿ ಶಾಂತಿ ಕದಡುವ ಯಾವುದೇ ಸಂಘಟನೆಯಾಗಲಿ ಅಂತಹ ಸಂಘಟನೆ ನಿಷೇಧಕ್ಕೆ ನಮ್ಮ ಬೆಂಬಲವಿದೆ. ಪಿಎಫ್ಐ ಸೇರಿ ಯಾರೇ ಆಗಿರಲಿ ದ್ವೇಷ ಹರಡುವವರು ಯಾರೇ ಇದ್ದರೂ ಅವರ ವಿರುದ್ಧ ನಾವು ಹೋರಾಡುತ್ತೇವೆ ಎಂದರು.
ಎಐಸಿಸಿ ಅಧ್ಯಕ್ಷ ಸ್ಥಾನ ವಿಚಾರಕ್ಕೆ ಸಂಬಂಧಿಸಿದಂತೆ ಗಾಂಧಿ ಕುಟುಂಬ ಹೊರತುಪಡಿಸಿ ಬೇರೆ ಯಾರೇ ಅಧ್ಯಕ್ಷರಾದರೂ ಸಮಸ್ಯೆಯಿಲ್ಲ. ಎಲ್ಲರಿಗೂ ಸಮಾನ ಅವಕಾಶಗಳಿವೆ. ಎಲ್ಲರೂ ಕಾಂಗ್ರೆಸ್ ಪಕ್ಷದವರೇ ಆಗಿದ್ದಾರೆ ಎಂದು ಹೇಳಿದರು.