
ಬೆಂಗಳೂರಿನ ಶಂಕರಪುರ ಭಾಗದ ರಾಷ್ಟ್ರೀಯ ಸ್ವಯಂ ಸೇವಕ ಸಂಘ ಜುಲೈ 16ರ ಭಾನುವಾರದಂದು ಬುಲ್ ಟೆಂಪಲ್ ರಸ್ತೆಯ ಶ್ರೀ ನಿಜಗುಣ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿದ್ದ ಶ್ರೀ ಗುರು ಪೂಜಾ ಉತ್ಸವ ಕಾರ್ಯಕ್ರಮದಲ್ಲಿ ಖ್ಯಾತ ಸಿನಿಮಾ ನಿರ್ದೇಶಕ ಹಾಗೂ ಬರಹಗಾರರಾದ ನಾಗತಿಹಳ್ಳಿ ಚಂದ್ರಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಹೇಳಲಾಗಿತ್ತು.
ಈ ಕುರಿತ ಆಹ್ವಾನ ಪತ್ರಿಕೆಯೂ ಸಹ ಪ್ರಕಟವಾಗಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಸಮಾಜವಾದಿ ಚಿಂತನೆಯ ನಾಗತಿಹಳ್ಳಿ ಚಂದ್ರಶೇಖರ್ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸಿ ಪೋಸ್ಟ್ ಹಾಕಿದ್ದರು. ಇದೀಗ ಈ ಕುರಿತಂತೆ ನಾಗತಿಹಳ್ಳಿ ಚಂದ್ರಶೇಖರ್ ಸ್ಪಷ್ಟನೆ ನೀಡಿದ್ದಾರೆ.
‘ಈ ಸಮಾರಂಭದಲ್ಲಿ ನಾನು ಭಾಗವಹಿಸುತ್ತಿಲ್ಲ. ಅದನ್ನು ನಾನು ಸ್ಪಷ್ಟಪಡಿಸಿಯೂ ಆಮಂತ್ರಣದಲ್ಲಿ ನನ್ನ ಹೆಸರು ಅಚ್ಚಾಗಿದೆ. ಅದು ‘ಆಕಸ್ಮಿಕ’ಎಂದು ಅವರು ಕ್ಷಮೆ ಯಾಚಿಸಿದ್ದಾರೆ. ಅಲ್ಲಿಗೆ ವಿಷಯ ಮುಕ್ತಾಯಗೊಂಡಿದೆ. ಆ ದಿನಾಂಕದಂದು ನಾನು ದೂರದ ದೇಶದಲ್ಲಿ ಚಿತ್ರೀಕರಣದಲ್ಲಿರುವುದು ನನ್ನನ್ನು ಬಲ್ಲವರಿಗೆಲ್ಲ ತಿಳಿದಿದೆ. ನನ್ನನ್ನು ಅತ್ಯಂತ ಹತ್ತಿರದಿಂದ ಬಲ್ಲ, ನನ್ನನ್ನು ನಂಬುವ, ನನ್ನನ್ನು ಪ್ರೀತಿಸುವ, ನನ್ನನ್ನು ಬೆಳೆಸಿರುವ, ನನ್ನೊಂದಿಗೆ ಹಳ್ಳಿಯ ಕೆಲಸದಲ್ಲಿ ಕೈಜೋಡಿಸಿರುವ ಅಕ್ಕರೆಯ ಎಲ್ಲ ಮನಸ್ಸುಗಳಿಗೆ ಹೇಳುವ ಒಂದು ಮಾತು: ನಾನು ಏನಾಗಿದ್ದೀನೋ ಅದೇ ಆಗಿ ಇರುತ್ತೇನೆ. ನಾನು ಏನು ಮಾಡುತ್ತಿದ್ದೀನೋ ಅದು ಸರಿ ಇದೆ.ಅದನ್ನೇ ಮುಂದುವರೆಸುತ್ತೇನೆ.
ತಪ್ಪು ತಿಳಿಯಲು,ತಪ್ಪು ಹರಡಲು ತುದಿಗಾಲಲ್ಲಿ ನಿಂತವರನ್ನು, ನಿತ್ಯ ಹೊಸ,ಹುಸಿ ರೋಮಾಂಚನ ಬಯಸುವ ಮಹನೀಯರನ್ನು ಮನ್ನಿಸಿ ಮುಂದೆ ಹೋಗೋಣ. ಇಲ್ಲಿ ನಾವೆಲ್ಲ ಮಾಡಲೇಬೇಕಾದ ಜನಪರ ಕೆಲಸಗಳು ಬಹಳಷ್ಟಿವೆ. ಮಾಡೋಣ. ಇನ್ನು ಮಾತು ಸಾಕು.’ ಎಂದು ಹೇಳಿದ್ದಾರೆ.
