ಆರ್ಥಿಕ ಬಿಕ್ಕಟ್ಟಿನಿಂದ ತತ್ತರಿಸಿ ಹೋಗಿರುವ ಶ್ರೀಲಂಕಾ 51 ಶತಕೋಟಿ ಡಾಲರ್ ವಿದೇಶಿ ಸಾಲವನ್ನು ಮರುಪಾವತಿ ಮಾಡಿಲ್ಲ. ಈಗಾಗ್ಲೇ ದ್ವೀಪ ರಾಷ್ಟ್ರ ಸಂಪೂರ್ಣ ದಿವಾಳಿಯಾಗಿದ್ದು, ಅಲ್ಲಿನ ನಾಗರಿಕರಿಂದ್ಲೇ ಪ್ರತಿಭಟನೆಯನ್ನು ಎದುರಿಸ್ತಾ ಇದೆ. ಸರ್ಕಾರದ ರಾಜೀನಾಮೆಗೆ ಒತ್ತಾಯಿಸಿ ಸಾರ್ವಜನಿಕರು ಬೀದಿಗಿಳಿದಿದ್ದಾರೆ.
1948ರಲ್ಲಿ ಶ್ರೀಲಂಕಾ ಸ್ವಾತಂತ್ರ್ಯ ಪಡೆದಿತ್ತು. ಅದಾದ ಬಳಿಕ ಇದೇ ಮೊದಲ ಬಾರಿಗೆ ಲಂಕಾ ಇಂತಹ ದುಸ್ಥಿತಿಗೆ ತಲುಪಿದೆ. ದೇಶದ 22 ಮಿಲಿಯನ್ ಜನರಿಗೆ ಆಹಾರ ಸಿಗ್ತಾ ಇಲ್ಲ. ದಿನವಿಡೀ ವಿದ್ಯುತ್ ಕಡಿತದಿಂದ ಜನರು ಕಂಗಾಲಾಗಿದ್ದಾರೆ. ಅಡುಗೆ ಅನಿಲವೂ ಇಲ್ಲದೆ ಜೀವನ ನಡೆಸುವುದೇ ದುಸ್ತರವಾಗಿಬಿಟ್ಟಿದೆ. ಇದರಿಂದ ಆಕ್ರೋಶಗೊಂಡಿರೋ ಜನರು, ಸರ್ಕಾರದ ಸಚಿವರುಗಳ ಮನೆಗೆ ನುಗ್ಗಲು ಯತ್ನಿಸಿದ್ದರು. ಭದ್ರತಾ ಪಡೆಗಳು, ಅಶ್ರುವಾಯು ಮತ್ತು ರಬ್ಬರ್ ಬುಲೆಟ್‌ಗಳನ್ನು ಪ್ರಯೋಗಿಸಿ ಪ್ರತಿಭಟನಾಕಾರರನ್ನು ಚದುರಿಸಬೇಕಾಯ್ತು.
ಶ್ರೀಲಂಕಾ ವಿದೇಶಗಳಿಂದ್ಲೂ ಕೋಟ್ಯಂತರ ರೂಪಾಯಿ ಸಾಲ ಪಡೆದಿದೆ. ಆದ್ರೆ ಅದನ್ನು ಮರುಪಾವತಿ ಮಾಡುವಷ್ಟು ಹಣ ಲಂಕಾ ಸರ್ಕಾರದ ಬೊಕ್ಕಸದಲ್ಲಿಲ್ಲ. ದೇಶದ ಆರ್ಥಿಕ ಸ್ಥಿತಿ ಮತ್ತಷ್ಟು ಹದಗೆಡುವುದನ್ನು ತಡೆಯುವ ಸಲುವಾಗಿ ಸರ್ಕಾರವು ತುರ್ತು ಕ್ರಮ ತೆಗೆದುಕೊಳ್ತಿದೆ ಅಂತಾ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಸಾಲದಾತರು ತಮಗೆ ಪಾವತಿಸಬೇಕಾದ ಯಾವುದೇ ಬಡ್ಡಿ ಹಣವನ್ನು ಬಂಡವಾಳ ಮಾಡಿಕೊಳ್ಳಲು ಅಥವಾ ಶ್ರೀಲಂಕಾದ ರೂಪಾಯಿಗಳಲ್ಲಿ ಮರುಪಾವತಿಯನ್ನು ಆಯ್ಕೆ ಮಾಡಿಕೊಳ್ಳಲು ಮುಕ್ತರಾಗಿದ್ದಾರೆಂದು ಸಹ ಸರ್ಕಾರ ಸ್ಪಷ್ಟಪಡಿಸಿದೆ.
ಕೊರೊನಾ ವೈರಸ್ ನಿಂದಾಗಿ ಶ್ರೀಲಂಕಾಕ್ಕೆ ಪ್ರವಾಸೋದ್ಯಮದಿಂದ ಬರ್ತಿದ್ದ ಆದಾಯಕ್ಕೆ ಕುತ್ತು ಬಂದಿದೆ. ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಸಹ ಸಾಧ್ಯವಾಗಿಲ್ಲ. ಲಂಕಾ ಸರ್ಕಾರ ತನ್ನ ವಿದೇಶಿ ಕರೆನ್ಸಿ ಮೀಸಲುಗಳನ್ನು ಸಂರಕ್ಷಿಸಲು ಮತ್ತು ಈಗ ಮಾಡಿರೋ ಸಾಲವನ್ನು ಮರುಪಾವತಿ ಮಾಡುವ ಸಲುವಾಗಿ, ವಿದೇಶಿ ಕರೆನ್ಸಿಗಳ ಆಮದು ನಿಷೇಧವನ್ನು ವಿಧಿಸಿತ್ತು.
ಸರ್ಕಾರದ ದುರಾಡಳಿತ, ಹಲವು ವರ್ಷಗಳಿಂದ ಬೆಳೆಯುತ್ತಲೇ ಇರುವ ಸಾಲ ಹಾಗೂ ಅನಪೇಕ್ಷಿತ ತೆರಿಗೆ ಕಡಿತಗಳಿಂದ ಶ್ರೀಲಂಕಾ ಈ ಸ್ಥಿತಿಗೆ ತಲುಪಿದೆ. ಸರ್ಕಾರದ ದುರಾಡಳಿತದಿಂದಾಗಿ ಅಲ್ಲಿನ ನಾಗರಿಕರು ಹತಾಶ ಸ್ಥಿತಿಗೆ ತಲುಪಿದ್ದಾರೆ. ಅಡುಗೆ ಸ್ಟೌವ್‌ಗಳಿಗೆ ಇಂಧನ, ಗ್ಯಾಸ್ ಮತ್ತು ಸೀಮೆ ಎಣ್ಣೆ ಸರಬರಾಜಾಗುತ್ತಿಲ್ಲ. ಅವುಗಳನ್ನು ಖರೀದಿಸಲು ಜನರು ಸರತಿ ಸಾಲಲ್ಲಿ ಕಾಯ್ತಿದ್ದಾರೆ.
ಪ್ರತಿಭಟನೆ ಮುಂದುವರಿಸಿರೋ ಜನರು, ಅಧ್ಯಕ್ಷ ಗೊಟಬಯ ರಾಜಪಕ್ಸ ಅವರ ರಾಜೀನಾಮೆಗೆ ಆಗ್ರಹಿಸಿ, ಅವರ ನಿವಾಸದೆದುರು ಬೀಡುಬಿಟ್ಟಿದ್ದಾರೆ. ಕಳೆದ ವರ್ಷವೇ ಅಂತರಾಷ್ಟ್ರೀಯ ರೇಟಿಂಗ್ ಏಜೆನ್ಸಿಗಳು ಶ್ರೀಲಂಕಾವನ್ನು ಡೌನ್‌ಗ್ರೇಡ್ ಮಾಡಿದ್ದವು. ಸಾಲಗಳನ್ನು ಸಂಗ್ರಹಣೆ ಮತ್ತು ಆಹಾರ, ಇಂಧನ ಬೇಡಿಕೆಯನ್ನು ಪೂರೈಕೆಗಾಗಿ ವಿದೇಶಿ ಬಂಡವಾಳ ಮಾರುಕಟ್ಟೆಗಳನ್ನು ಪ್ರವೇಶಿದಂತೆ ನಿರ್ಬಂಧಿಸಿದ್ದವು.
ಸಾಲ ಮರುಪಾವತಿ ಮಾಡಲು ಸಾಧ್ಯವಿಲ್ಲ, ಹಾಗಾಗಿ ವಿನಾಯಿತಿ ಕೊಡಿ ಎಂದು ಶ್ರೀಲಂಕಾ ಸರ್ಕಾರ ಭಾರತ ಮತ್ತು ಚೀನಾವನ್ನು ಕೇಳಿತ್ತು. ಆದ್ರೆ ಅದಕ್ಕೆ ಬದಲಾಗಿ ಲಂಕಾದಿಂದ ವಸ್ತುಗಳನ್ನು ಆಮದು ಮಾಡಿಕೊಳ್ಳೋದಾಗಿ ಈ ರಾಷ್ಟ್ರಗಳು ಹೇಳಿವೆ. ಲಂಕಾ ಮಾಡಿರೋ ಒಟ್ಟಾರೆ ಸಾಲದಲ್ಲಿ ಶೇ.10ರಷ್ಟು ಪಾಲು ಚೀನಾ ಹಾಗೂ ಜಪಾನ್ ನದ್ದು. ಭಾರತದ ಪಾಲು ಶೇ.5ರಷ್ಟಿದೆ. ಈ ವರ್ಷ ಸಾಲ ಮರುಪಾವತಿಗೆ ಶ್ರೀಲಂಕಾಕ್ಕೆ ಸುಮಾರು 7 ಬಿಲಿಯನ್ ಡಾಲರ್ ಗಳಷ್ಟಿದೆ ಅಂತಾ ಹೇಳಲಾಗ್ತಿದೆ.