ಜಗತ್ತಿನ ದೊಡ್ಡಣ್ಣ ಎನಿಸಿಕೊಂಡಿರೋ ಅಮೆರಿಕವೇ ಆರ್ಥಿಕ ಬಿಕ್ಕಟ್ಟಿಗೆ ಸಿಲುಕಿರೋದು ಬೆಳಕಿಗೆ ಬಂದಿದೆ. ಅಮೆರಿಕವೇ ಸಂಕಷ್ಟಕ್ಕೆ ಸಿಲುಕಿರುವುದರಿಂದ ಇಡೀ ವಿಶ್ವಕ್ಕೇ ಆರ್ಥಿಕ ತೊಂದರೆ ಎದುರಾಗಬಹುದು ಎಂಬ ಆತಂಕ ಶುರುವಾಗಿದೆ.
ಅಮೆರಿಕದ ಹಿರಿಯ ಅಧಿಕಾರಿ, ಟ್ರೆಶರಿ ಸೆಕ್ರೆಟರಿ ಜಾನೆಟ್ ಯೆಲೆನ್ ಪ್ರಕಾರ, ಅಲ್ಲಿನ ಫೆಡರಲ್ ಸರ್ಕಾರ ಈ ವರ್ಷ ಜೂನ್‌ನಲ್ಲಿ ಬಿಲ್‌ಗಳನ್ನು ಪಾವತಿಸಲು ಹಣದ ಕೊರತೆಯನ್ನು ಎದುರಿಸಬಹುದು. ಅಮೆರಿಕ ಸರ್ಕಾರ ಸಾಲದ ಮಿತಿಯನ್ನು ಹೆಚ್ಚಿಸುವುದು ಅನಿವಾರ್ಯ ಅನ್ನೋದು ಅವರ ಅಭಿಪ್ರಾಯ. ಈ ಸಂಬಂಧ ಯೆಲೆನ್, ಹೌಸ್ ಸ್ಪೀಕರ್ ಕೆವಿನ್ ಮೆಕಾರ್ಥಿಗೆ ಪತ್ರ ಕೂಡ ಬರೆದಿದ್ದಾರೆ.
ಜಾಗತಿಕ ಆರ್ಥಿಕತೆಗೆ ಹೊಡೆತ ಕೊಡಬಲ್ಲ ಸಾಧ್ಯತೆಗಳತ್ತ ಅಮೆರಿಕ ಮುನ್ನಡೆಯುತ್ತಿದೆ ಅನ್ನೋ ಭಯವೀಗ ಆವರಿಸಿದೆ. ಆರ್ಥಿಕ ಬಿಕ್ಕಟ್ಟಿನ ಸಾಧ್ಯತೆಗಳ ಹಿನ್ನೆಲೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡೆನ್, ಮೇ 9ರಂದು ಮಹತ್ವದ ಸಭೆ ನಡೆಸಲಿದ್ದಾರೆ. ಉನ್ನತ ಅಧಿಕಾರಿಗಳನ್ನು ಬಿಡೆನ್, ಶ್ವೇತಭವನಕ್ಕೆ ಆಹ್ವಾನಿಸಿದ್ದಾರೆ.
ಆರ್ಥಿಕ ಕುಸಿತದ ಬಗ್ಗೆ ಚರ್ಚಿಸಲು ರಿಪಬ್ಲಿಕನ್ ಹೌಸ್ ಸ್ಪೀಕರ್ ಕೆವಿನ್ ಮೆಕಾರ್ಥಿ, ಹೌಸ್ ಆಫ್ ಡೆಮಾಕ್ರಟಿಕ್ ನಾಯಕ ಹಕೀಮ್ ಜೆಫ್ರೀಸ್, ಸೆನೆಟ್ನ ಚಕ್ ಶುಮರ್ ಮತ್ತು ರಿಪಬ್ಲಿಕನ್ ನಾಯಕ ಮಿಚ್ ಮೆಕ್‌ಕಾನ್ನೆಲ್ ಅವರನ್ನು ಆಹ್ವಾನಿಸಿದ್ದಾರೆ. ಸಾಲದ ಮಿತಿಯನ್ನು ಹೆಚ್ಚಿಸುವುದಕ್ಕೆ ಬದಲಾಗಿ ಖರ್ಚು ಕಡಿತ ಮತ್ತು ಇತರ ನೀತಿ ಬದಲಾವಣೆಗಳನ್ನು ಮಾಡುವಂತೆ ರಿಪಬ್ಲಿಕನ್ನರು ಒತ್ತಾಯಿಸುತ್ತಿದ್ದಾರೆ. ಬೈಡೆನ್ ಕೂಡ ಸಾಲದ ಮಿತಿ ಹೆಚ್ಚಳದ ಬಗ್ಗೆ ಒಲವು ಹೊಂದಿಲ್ಲ. ಬದಲಾಗಿ ಬಜೆಟ್ ಕಡಿತದ ಬಗ್ಗೆ ಚರ್ಚಿಸಲು ಮುಂದಾಗಿದ್ದಾರೆ.
2011ರಲ್ಲಿ ಕೂಡ ಅಮೆರಿಕದಲ್ಲಿ ಇಂಥದ್ದೇ ಸ್ಥಿತಿ ಎದುರಾಗಿತ್ತು. ದೇಶವನ್ನು ಆರ್ಥಿಕ ಮುಗ್ಗಟ್ಟಿನತ್ತ ಕೊಂಡೊಯ್ದಿತ್ತು. ಅಮೆರಿಕದ ಉನ್ನತ ದರ್ಜೆಯ ಕ್ರೆಡಿಟ್ ರೇಟಿಂಗ್ ಅನ್ನು ಡೌನ್‌ಗ್ರೇಡ್ ಮಾಡಲು ಕಾರಣವಾಗಿತ್ತು. ಆದರೆ ಪ್ರಸ್ತುತ ಅಮೆರಿಕದ ಸಾಲದ ಸಮಸ್ಯೆ ಮುಂಬರುವ ವರ್ಷಗಳಲ್ಲಿ ಮುಂದುವರಿಯುವ ಸಾಧ್ಯತೆಯಿದೆ. ಸಾಮಾಜಿಕ ಭದ್ರತೆ ಮತ್ತು ಮೆಡಿಕೇರ್‌ನಂತಹ ಕಾರ್ಯಕ್ರಮಗಳಿಗೆ ಬಜೆಟ್‌ನ ಬಹುಪಾಲು ಮೀಸಲಾಗಿದೆ. ಪ್ರಸ್ತುತ ಆರ್ಥಿಕ ಹೊಡೆತದ ಚರ್ಚೆ ಕಾವೇರುತ್ತಿರುವ ಬೆನ್ನಲ್ಲೇ ಇದು ಜೋ ಬಿಡೆನ್‌ಗೆ ತಲೆನೋವಾಗಿ ಪರಿಣಮಿಸಿದೆ. ಯಾಕಂದ್ರೆ 2024ರಲ್ಲಿ ಬಿಡೆನ್ ಮರುಚುನಾವಣೆಯನ್ನು ಬಯಸುತ್ತಿದ್ದಾರೆ. ಆರ್ಥಿಕ ಬಿಕ್ಕಟ್ಟನ್ನೇ ಅಸ್ತ್ರ ಮಾಡಿಕೊಳ್ಳಲು ವಿಪಕ್ಷಗಳು ಮುಂದಾಗಿವೆ.