ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ 10 ಮೀಸಲಾತಿಯನ್ನು ಘೋಷಿಸಿದ್ದ ಕೇಂದ್ರ ಸರ್ಕಾರದ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಇದರ ವಿಚಾರಣೆ ಐವರು ಸದಸ್ಯರನ್ನು ಒಳಗೊಂಡಿದ್ದ ನ್ಯಾಯಪೀಠದಲ್ಲಿ ನಡೆದಿದ್ದು, ಮೂವರು ನ್ಯಾಯಮೂರ್ತಿಗಳು ಸರ್ಕಾರದ ತೀರ್ಮಾನ ಸರಿ ಎಂದರೆ ಇಬ್ಬರು ನ್ಯಾಯಮೂರ್ತಿಗಳು ಇದಕ್ಕೆ ವಿರೋಧಿಸಿದ್ದರು. ಆದರೆ ಬಹುಮತದ ಆಧಾರದಲ್ಲಿ ಕೇಂದ್ರದ ತೀರ್ಮಾನಕ್ಕೆ ಮನ್ನಣೆ ಸಿಕ್ಕಿದೆ.
ತಮಿಳುನಾಡು ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡಾ 10 ಮೀಸಲಾತಿಯನ್ನು ನೀಡಲು ವಿರೋಧಿಸಿಕೊಂಡು ಬಂದಿದ್ದು, ಈ ತೀರ್ಮಾನ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ವಿರೋಧಿಯಾಗಿದೆ ಎಂದು ಹೇಳುತ್ತಿದೆ. ಅಲ್ಲದೆ ತಮಿಳುನಾಡು ಸರ್ಕಾರ ಆರ್ಥಿಕವಾಗಿ ಹಿಂದುಳಿದವರಿಗೆ ಮೀಸಲಾತಿಯನ್ನು ಜಾರಿಗೊಳಿಸಿಲ್ಲ.
ಇದರ ಮಧ್ಯೆ ಆರ್ಥಿಕವಾಗಿ ಹಿಂದುಳಿದವರಿಗೆ ಶೇಕಡ 10 ಮೀಸಲಾತಿ ನೀಡುವುದನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿರುವ ತೀರ್ಪಿನ ವಿರುದ್ಧ ಮರು ಪರಿಶೀಲನಾ ಅರ್ಜಿ ಸಲ್ಲಿಸುವುದಾಗಿ ತಮಿಳುನಾಡು ಡಿಎಂಕೆ ಘಟಕ ತಿಳಿಸಿದೆ. ನವೆಂಬರ್ 12ರಂದು ಸರ್ವ ಪಕ್ಷಗಳ ಸಭೆ ನಡೆಯಲಿದ್ದು, ಬಳಿಕ ಮುಂದಿನ ತೀರ್ಮಾನ ಕೈಗೊಳ್ಳುವುದಾಗಿ ಹೇಳಲಾಗಿದೆ.