ಆರೋಪಿಗೆ ನೀಡಿದ ಜಾಮೀನು ರದ್ದುಗೊಳಿಸುವ ಕುರಿತಂತೆ ಸುಪ್ರೀಂ ಕೋರ್ಟ್ ಮಹತ್ವದ ಹೇಳಿಕೆ ನೀಡಿದೆ. ಒಂದೊಮ್ಮೆ ಆರೋಪ ಪಟ್ಟಿಯಲ್ಲಿ ವಿಶೇಷ ಮತ್ತು ಬಲವಾದ ಪ್ರಕರಣ ಉಲ್ಲೇಖವಾಗಿದ್ದ ಪಕ್ಷದಲ್ಲಿ ಆಗ ಆರೋಪಿಗೆ ನೀಡಿರುವ ಜಾಮೀನು ರದ್ದು ಮಾಡಬಹುದು ಎಂದು ತಿಳಿಸಿದೆ.
ಆಂಧ್ರಪ್ರದೇಶ ಮುಖ್ಯಮಂತ್ರಿ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರ ಚಿಕ್ಕಪ್ಪ ವೈ.ಎಸ್. ವಿವೇಕಾನಂದ ರೆಡ್ಡಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರದಂದು ನಡೆದ ವಿಚಾರಣೆ ವೇಳೆ ಜಾಮೀನು ರದ್ಧತಿ ಕುರಿತಂತೆ ಈ ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ಹತ್ಯೆ ಆರೋಪ ಎದುರಿಸುತ್ತಿರುವ ಯರ್ರಾ ಗಂಗಿರೆಡ್ಡಿಗೆ ನೀಡಿರುವ ಜಾಮೀನು ರದ್ದುಗೊಳಿಸುವಂತೆ ಸಿಬಿಐ ಅರ್ಜಿ ಸಲ್ಲಿಸಿದ್ದು, ಇದರ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಎಂ.ಆರ್. ಶಾ ಮತ್ತು ಸಿ.ಟಿ. ರವಿಕುಮಾರ್ ಅವರನ್ನೊಳಗೊಂಡ ದ್ವಿ ಸದಸ್ಯ ಪೀಠ ನಡೆಸಿತ್ತು.
ಆರೋಪ ಪಟ್ಟಿ ಸಲ್ಲಿಕೆಯಾದ ತಕ್ಷಣ ಜಾಮೀನು ರದ್ದುಪಡಿಸಲು ಆಗುವುದಿಲ್ಲ ಎಂದು ಹೇಳಿದ ನ್ಯಾಯಮೂರ್ತಿಗಳು, ಒಂದೊಮ್ಮೆ ಆರೋಪ ಪಟ್ಟಿಯಲ್ಲಿ ಬಲವಾದ ಪ್ರಕರಣ ಉಲ್ಲೇಖಿಸಿದ್ದರೆ ಅಂತಹ ಸಂದರ್ಭದಲ್ಲಿ ಇದು ಜಾಮೀನು ರಹಿತ ಅಪರಾಧ ಎಂಬುದು ನ್ಯಾಯಾಲಯಕ್ಕೆ ಮನವರಿಕೆಯಾದರೆ ಮಾತ್ರ ಆರೋಪಿಗೆ ನೀಡಿರುವ ಜಾಮೀನು ರದ್ದು ಮಾಡಬಹುದು ಎಂದು ತಿಳಿಸಿದೆ. ಹಾಗೆಯೇ ಸಿಬಿಐ ಸಲ್ಲಿಸಿರುವ ಆರೋಪ ಪಟ್ಟಿಯಲ್ಲಿ ಬಲವಾದ ಕಾರಣ ಉಲ್ಲೇಖವಾಗಿದೆಯೇ ಎಂಬುದನ್ನು ಪರಿಶೀಲಿಸುವಂತೆ ತೆಲಂಗಾಣ ಹೈಕೋರ್ಟಿಗೆ ಸೂಚಿಸಲಾಗಿದೆ