ಬೆಂಗಳೂರು: ಹಿಂದಿನ ಬಾರಿಯ ಆಪರೇಷನ್ ಕಮಲಕ್ಕೆ ಈ ಬಾರಿ ಕಾಂಗ್ರೆಸ್ ನಾಯಕರು ಆಪರೇಷನ್ ಹಸ್ತದ ಮೂಲಕ ಬಿಜೆಪಿ ನಾಯಕರನ್ನು ತಮ್ಮತ್ತ ಸೆಳೆಯುತ್ತಿದ್ದರೆ ಕಂದಾಯ ಸಚಿವ ಆರ್.ಅಶೋಕ್ ರಾಜ್ಯದಲ್ಲಿ ಮತ್ತೊಂದು ಅಚ್ಚರಿ ಕಾದಿದೆ ಎಂದು ಹೇಳುವ ಮೂಲಕ ಮತ್ತೆ ಆಪರೇಷನ್ ಕಮಲದ ಸುಳಿವು ನೀಡಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊದಿಗೆ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಶೀಘ್ರದಲ್ಲಿ ದೊಡ್ಡ ಅಚ್ಚರಿ ಕಾದಿದೆ. ಕಳೆದ ಬಾರಿಯಂತೆಯೇ ಈ ಬಾರಿಯೂ ಕಾಂಗ್ರೆಸ್ ನಾಯಕರ ದೊಡ್ಡ ಟೀಂ ಬಿಜೆಪಿಗೆ ಸೇರ್ಪಡೆಯಾಗಲಿದೆ. 10 ಶಾಸಕರು ಬಿಜೆಪಿಗೆ ಬರಲು ಸಿದ್ಧರಾಗಿದ್ದಾರೆ. ಮಾತುಕತೆ ನಡೆದಿದೆ ಎಂದು ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರ ಇದ್ದಾಗ 17 ಶಾಸಕರನ್ನು ಕರೆತಂದೆವು. ಕಾಂಗ್ರೆಸ್-ಜೆಡಿಎಸ್ ನವರದ್ದೇ ಸರ್ಕಾರ, ಆಡಳಿತ, ಪೊಲೀಸ್ ವ್ಯವಸ್ಥೆಯೂ ಅವರದ್ದೇ ಇತ್ತು. ಆದರೂ ಆಗಲೇ ಏನೂ ಮಾಡಲು ಸಾಧ್ಯವಾಗಿಲ್ಲ. ಈಗ ಅವರಿಂದ ಏನು ಮಾಡಲು ಸಾಧ್ಯ? ಆಗ ಬಿಜೆಪಿಗೆ ಸೇರ್ಪಡೆಯಾದ ಶಾಸಕರ ಟೀಂ ನ ಸ್ನೇಹಿತರೆಲ್ಲರೂ ಈಗ ಬಿಜೆಪಿಗೆ ಬರುತ್ತಿದ್ದಾರೆ. 10 ಜನರ ಪಟ್ಟಿ ಸಿದ್ಧವಾಗಿದೆ. ಕಾಂಗ್ರೆಸ್ ನಾಯಕರು ಯಾರನ್ನೂ ತಡೆಯಲು ಸಾಧ್ಯವಿಲ್ಲ. ಆದಷ್ಟು ಬೇಗ 10 ಜನರ ಟೀಂ ಕರೆತರುವುದಾಗಿ ಸಚಿವ ಮುನಿರತ್ನ ಹೇಳಿದ್ದಾರೆ. ರಾಜ್ಯದಲ್ಲಿ ಸಂಕ್ರಾಂತಿ ವೇಳೆಗೆ ಸಮ್ ಕ್ರಾಂತಿ ನಡೆಯಲಿದೆ ಎಂದು ತಿಳಿಸಿದರು.
ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಶೀಘ್ರದಲ್ಲಿಯೇ ಬಿಜೆಪಿ ನಾಯಕರ ಗುಂಪೇ ಕಾಂಗ್ರೆಸ್ ಗೆ ಬರಲಿದೆ. ಅಚ್ಚರಿಯನ್ನು ಕಾದು ನೋಡಿ ಎಂದು ಹೇಳುವ ಮೂಲಕ ಟಾಂಗ್ ನೀಡಿದ್ದಾರೆ. ಒಟ್ಟಾರೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ-ಕಾಂಗ್ರೆಸ್ ನಾಯಕರು ಆಪರೇಷನ್ ಕಮಲ-ಆಪರೇಷನ್ ಹಸ್ತ ವಿಚಾರವಾಗಿ ಪೈಪೋಟಿಗೆ ಇಳಿದಿದ್ದು ರಾಜ್ಯ ರಾಜಕಾರಣ ಕ್ಷಣ ಕ್ಷಣಕ್ಕೂ ಕುತೂಹಲಕ್ಕೆ ಸಾಕ್ಷಿಯಾಗುತ್ತಿದೆ.