ತುಮಕೂರು: ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್ ಪಕ್ಷ ತೊರೆದು ಬೇರೆ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂಬ ಊಹಾಪೋಹಗಳಿಗೆ ತೆರೆಬಿದ್ದಿದ್ದು, ತನ್ನನ್ನು ಆಪರೇಷನ್ ಕಮಲದ ಮೂಲಕ ಬಿಜೆಪಿಗೆ ಸೆಳೆಯಲು ಯತ್ನ ನಡೆದಿತ್ತು ಎಂಬ ಸ್ಫೋಟಕ ಮಾಹಿತಿಯನ್ನು ಸ್ವತಃ ಶ್ರೀನಿವಾಸ್ ಬಾಯ್ಬಿಟ್ಟಿದ್ದಾರೆ.
ಗುಬ್ಬಿಯಲ್ಲಿ ಮಾತನಾಡಿದ ಅವರು, ಬಿ.ಎಲ್.ಸಂತೋಷ್ ನನ್ನ ಅಳಿಯನ ಮೂಲಕ ಬಿಜೆಪಿಗೆ ಬರುವಂತೆ ಒತ್ತಾಯ ಮಾಡಿದರು. ನಿವೃತ್ತಿ ತೆಗೆದುಕೊಂಡು ಮನೆಯಲ್ಲಿಯೇ ಇರ್ತಿನಿ ಹೊರತು ಜೆಡಿಎಸ್ ತೊರೆಯಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆ. ನಾನು ಇಂಡಿಪೆಂಡಂಟ್ ಆಗಿ ಗೆದ್ದು ಜೆಡಿಎಸ್ ಗೆ ಬಂದವನು. ಪ್ರಾಮಾಣಿಕವಾಗಿ ಜೆಡಿಎಸ್ ನಲ್ಲಿದ್ದೇನೆ. ಇನ್ನು ಮುಂದೆಯೂ ಜೆಡಿಎಸ್ ನಲ್ಲಿಯೇ ಇರುತ್ತೇನೆ. ಅಧಿಕಾರದ ಆಸೆಗಾಗಿ ಬೇರೆ ಪಕ್ಷಕ್ಕೆ ಹೋಗುವಂತವನಲ್ಲ ಎಂದರು.
ಆಪರೇಷನ್ ಕಮಲದ ಮೂಲಕ ನನ್ನನ್ನು ಸೆಳೆಯುವ ಯತ್ನ ನಡೆದಿದ್ದು ನಿಜ. ಆದರೆ ಆಗಲೇ ಅವರಿಗೆ ಸ್ಪಷ್ಟಪಡಿಸಿದ್ದೆ. ಅಧಿಕಾರ ಎಂಬುದು ಶಾಶ್ವತ ಅಲ್ಲ. ಬಿಜೆಪಿ ಅಥವಾ ಕಾಂಗ್ರೆಸ್ ಗಾಗಲಿ ಹೋಗುವ ಯಾವುದೇ ಆಸಕ್ತಿಯೂ ಇಲ್ಲ. ಸಾಧ್ಯವಾದಷ್ಟು ಕ್ಷೇತ್ರದಲ್ಲಿಯೇ ಇದ್ದು, ಕೆಲಸ ಮಾಡುತ್ತೇನೆ. ಕುಮಾರಸ್ವಾಮಿ ನನ್ನ ಮೇಲೆ ಬೇಸರ ಮಾಡಿಕೊಳ್ಳುವ ಸಂದರ್ಭವಿಲ್ಲ, ಕಾರಣ ನಾನೊಬ್ಬ ಪ್ರಾಮಾಣಿಕ ವ್ಯಕ್ತಿ. ಅವರು ನನಗೆ ತೊಂದರೆ ಮಾಡಿದರೆ ನಾನು ಬೇಜಾರು ಮಾಡಿಕೊಳ್ಳಬೇಕು ಹೊರತು ಅವರಲ್ಲ ಎಂದು ಹೇಳಿದರು.