ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರಾಜಕಾಲುವೆಗಳ ಮೇಲೆ ನಿರ್ಮಿಸಿದ್ದ ಕಟ್ಟಡಗಳ ತೆರವು ಕಾರ್ಯಾಚರಣೆ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಬೃಹತ್ ಕಟ್ಟಡಗಳು, ಅಪಾರ್ಟ್ ಮೆಂಟ್, ಶಾಲಾ ಕಾಂಪೌಂಡ್ ಗಳು, ಆಸ್ಪತ್ರೆಗಳನ್ನು ತೆರವುಗೊಳಿಸಲಾಗುತ್ತಿದೆ.
ಶಾಂತಿನಿಕೇತನ ಬಡಾವಣೆಯಲ್ಲಿರುವ ಪ್ರತಿಷ್ಠಿತ ಚೈತನ್ಯ ಸ್ಕೂಲ್ ಕಾಂಪೌಂಡ್ ನ್ನು ಬಿಬಿಎಂಪಿ ಅಧಿಕಾರಿಗಳು ಜೆಸಿಬಿ ಮೂಲಕ ತೆರವುಗೊಳಿಸಿದ್ದು, ಶಾಲಾ ಆಡಳಿತ ಮಂಡಳಿ ಆಕ್ರೋಶ ವ್ಯಕ್ತಪಡಿಸಿದೆ.
10 ವರ್ಷಗಳ ಹಿಂದೆಯೇ ನಾವು ಇಲ್ಲಿ ಶಾಲೆಯನ್ನು ನಿರ್ಮಿಸಿದ್ದೇವೆ. ಸೂಕ್ತ ಟ್ಯಾಕ್ಸ್ ಕೂಡ ಕಟ್ಟುತ್ತಿದ್ದೇವೆ. ಇಷ್ಟು ವರ್ಷ ಇಲ್ಲದ ಸಮಸ್ಯೆ ಈಗ ಎದುರಾಗಿದೆ. ಯಾವುದೇ ಸರ್ವೆ ಕೂಡ ಮಾಡದೇ ಬಿಬಿಎಂಪಿ ಅಧಿಕಾರಿಗಳು ಇಲ್ಲಿ ಕಾಲುವೆ ಇತ್ತು ಎಂದು ಹೇಳಿ ಕಾಂಪೌಂಡ್ ತೆರವು ಮಾಡುತ್ತಿದ್ದಾರೆ. ಅಧಿಕಾರಿಗಳ ಕ್ರಮ ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚೆಲ್ಲಘಟ್ಟದಲ್ಲಿರುವ ಶಾಸಕ ಹ್ಯಾರಿಸ್ ಗೆ ಸೇರಿದ ನಲಪಾಡ್ ಅಕಾಡೆಮಿಯಿಂದ ಒತ್ತುವರಿಯಾದ ಜಾಗವನ್ನು ಕೂಡ ತೆರವುಗೊಳಿಸಲಾಗಿದೆ. ಮತ್ತೊಂದೆಡೆ ಬಾಗ್ಮನೆ ಟೆಕ್ ಪಾರ್ಕ್ ಹಾಗೂ ಬಿಬಿಎಂಪಿ ಅಧಿಕಾರಿಗಳ ನಡುವಿನ ಪೈಪೋಟಿ ಮುಂದುವರೆದಿದೆ. ರಾಜಕಾಲುವೆ ಒತ್ತುವರಿ ಮಾಡಿ ಬಾಗ್ಮನೆ ಟೆಕ್ ಪಾರ್ಕ್ ನಿರ್ಮಾಣವಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತೆರವಿಗೆ ಮುಂದಾಗಿದ್ದು, ಈ ನಡುವೆ ಕೋರ್ಟ್ ನಿಂದ ಸ್ಟೇ ತಂದಿರುವ ಬಾಗ್ಮನೆ ಟೆಕ್ ಪಾರ್ಕ್ ರೀ ಸರ್ವೆ ಮಾಡಲು ಮನವಿ ಮಾಡಿದೆ. ಈ ಹಿನ್ನೆಲೆಯಲ್ಲಿ ಈ ಭಾಗದಲ್ಲಿ ರೀ ಸರ್ವೆ ನಡೆಯಲಿದೆ ಎಂಬ ಮಾತು ಕೇಳಿಬರುತ್ತಿದೆ.
ಬಾಗ್ಮನೆ ಟೆಕ್ ಪಾರ್ಕ್ ಒತ್ತುವರಿಯಾಗಿದ್ದರೂ ಅಧಿಕಾರಿಗಳು ಅದರತ್ತ ಸುಳಿಯದೇ ಸುತ್ತ ಮುತ್ತಲಿನವರ ನಿವಾಸ, ಕಟ್ಟಡಗಳ ತೆರವಿಗೆ ಮುಂದಾಗಿರುವ ಬಿಬಿಎಂಪಿ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.