ಬೆಂಗಳೂರು; ಕೋವಿಡ್ ಹಿನ್ನೆಲೆಯಲ್ಲಿ ಹಲವು ಶಾಲೆಗಳಲ್ಲಿ ಆನ್ ಲೈನ್ ಶಿಕ್ಷಣ ಮುಂದುವರೆದಿದ್ದು, ಆನ್ ಲೈನ್ ತರಗತಿಗಳ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ, ಆನ್ ಲೈನ್ ಶಿಕ್ಷಣದಿಂದ ಬಡ ಮಕ್ಕಳು ಕಲಿಕೆಯಿಂದ ದೂರವಾಗುತ್ತಿದ್ದಾರೆ ಎಂದು ತಿಳಿಸಿದ್ದಾರೆ.
ಆನ್ ಲೈನ್ ಶಿಕ್ಷಣ ಸೂಕ್ತವಲ್ಲ, ಇದು ನಗರ ಪ್ರದೇಶಗಳಿಗೆ ಮಾತ್ರ ಸರಿಯಾಗಿದೆ. ಆದರೆ ಗ್ರಾಮೀಣ ಭಾಗದ ಮಕ್ಕಳಿಗೆ ಅನಾನುಕೂಲವಾಗಿದೆ. ನೆಟ್ ವರ್ಕ್ ಸಮಸ್ಯೆ, ವಿದ್ಯುತ್ ಸಮಸ್ಯೆ, ಮೊಬೈಲ್ ಕೂಡ ಹಲವರ ಬಳಿ ಇರುವುದಿಲ್ಲ. ಹೀಗಿರುವಾಗ ಆನ್ ಲೈನ್ ತರಗತಿಗಳಿಂದ ಬಡವರಿಗೆ, ಗ್ರಾಮೀಣ ಭಾಗದ ಮಕ್ಕಳಿಗೆ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದರು.
ಆನ್ ಲೈನ್ ಕ್ಲಾಸ್ ನಿಂದಾಗಿ ಶ್ರೀಮಂತ ಮಕ್ಕಳು ಮಾತ್ರ ಕಲಿಯುತ್ತಾರೆ. ಬಡ ಮಕ್ಕಳು ಕಲಿಕೆಯಿಂದ ದೂರ ಉಳಿಯುತ್ತಾರೆ. ಹಾಗಾಗಿ ಆನ್ ಲೈನ್ ಶಿಕ್ಷಣ ಸರಿಯಲ್ಲ ಎಂದು ಹೇಳಿದರು.
ಇನ್ನು ಕೋವಿಡ್ ಕಾರಣಕ್ಕೆ ಕೆಲ ಜಿಲ್ಲೆಗಳಲ್ಲಿ 1-9ನೇ ತರಗತಿವರೆಗೆ ರಜೆ ನೀಡಿರುವ ವಿಚಾರವಾಗಿಯೂ ಅಸಮಾಧಾನ ವ್ಯಕ್ತಪಡಿಸಿದ ಅವರು, ಕೊರೊನಾ ಸೋಂಕು ಗಂಭೀರವಾಗಿಲ್ಲ. ಶಾಲೆಗಳಿಗೆ ರಜೆ ನೀಡಿದರೆ ಮಕ್ಕಳ ಬದುಕು ಹಾಳಾಗುತ್ತೆ. ಅಗತ್ಯ ಎಂದರೆ 1-5ನೇ ತರಗತಿವರೆಗೆ ಬಂದ್ ಮಾಡಲಿ ಆದರೆ 6ನೇ ತರಗತಿಗಳಿಂದ ಶಾಲೆ ಆರಂಭ ಮಾಡುವುದು ಒಳಿತು ಎಂದು ಹೇಳಿದರು.