ಪ್ರಶ್ನೆ ಪತ್ರಿಕೆ ಸೋರಿಕೆ ತಡೆಗಟ್ಟುವುದನ್ನು ಸೇರಿದಂತೆ ಹಲವು ಕಾರಣಗಳಿಗಾಗಿ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಇನ್ನು ಮುಂದೆ ನಡೆಸುವ ಎಲ್ಲ ಪರೀಕ್ಷೆಗಳ ಪ್ರಶ್ನೆ ಪತ್ರಿಕೆಗಳನ್ನು ಆನ್ ಲೈನ್ ಮೂಲಕವೇ ಕಳುಹಿಸಿಕೊಡಲು ಚಿಂತನೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಈ ಹಿಂದೆ ದ್ವಿತೀಯ ಪಿಯು ಪ್ರಶ್ನೆ ಪತ್ರಿಕೆ ಸೋರಿಕೆ ಆದ ಸಂದರ್ಭದಲ್ಲಿ ಪೂರಕ ಪರೀಕ್ಷೆಗೆ ಆನ್ ಲೈನ್ ಮೂಲಕ ಪ್ರಶ್ನೆ ಪತ್ರಿಕೆ ಕಳುಹಿಸಿ ಅದರಲ್ಲಿ ಯಶಸ್ವಿಯಾಗಿದ್ದು, ಇದೇ ಮಾದರಿಯನ್ನು ಪ್ರಸ್ತುತ ಈಗ ನಡೆಯುತ್ತಿರುವ 10ನೇ ತರಗತಿ ಪೂರ್ವಸಿದ್ಧತಾ ಪರೀಕ್ಷೆಗೂ ಅಳವಡಿಸಿಕೊಳ್ಳಲಾಗಿದೆ.
ಇದು ಯಶಸ್ಸು ಕಾಣುತ್ತಿರುವ ಕಾರಣ ಇನ್ನು ಮುಂದೆ SSLC, ಪಿಯುಸಿ, 5 ಮತ್ತು 8ನೇ ತರಗತಿ ಮೌಲ್ಯಾಂಕನ ಪರೀಕ್ಷೆ ಮೊದಲಾದವುಗಳಿಗೆ ಇದೇ ಮಾದರಿಯನ್ನು ಅಳವಡಿಸಿಕೊಳ್ಳಲು ಚಿಂತನೆ ನಡೆಸಲಾಗಿದೆ. ಈ ವಿಧಾನದಲ್ಲಿ ಮಂಡಳಿಯೇ ಪ್ರಶ್ನೆ ಪತ್ರಿಕೆ ರೂಪಿಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಲಾಗಿನ್ ಗೆ ಸಾಫ್ಟ್ ಕಾಪಿಯನ್ನು ಕಳಿಸಿ ಕೊಡಲಾಗುತ್ತದೆ. ಬಳಿಕ ಅಲ್ಲಿ ಮುದ್ರಣ ಮಾಡಿಕೊಂಡು ಪರೀಕ್ಷಾ ಕೇಂದ್ರಗಳಿಗೆ ರವಾನೆ ಮಾಡಲಾಗುತ್ತದೆ.
ಇದನ್ನು ಅಳವಡಿಸಲು ಸಾಧಕ ಬಾಧಕಗಳನ್ನು ಪರಿಶೀಲಿಸಲಾಗುತ್ತಿದ್ದು, ಎಲ್ಲ ಪ್ರಕ್ರಿಯೆಗಳು ಪೂರ್ಣಗೊಂಡ ಬಳಿಕ ಇದನ್ನು ಜಾರಿಗೊಳಿಸುವ ಸಾಧ್ಯತೆ ಇದೆ. ಈ ವಿಧಾನ ಅಳವಡಿಸಿಕೊಂಡರೆ ಪ್ರಶ್ನೆಪತ್ರಿಕೆ ಸೋರಿಕೆಯಾಗುವ ಸಾಧ್ಯತೆಯೂ ಕಡಿಮೆ. ಜೊತೆಗೆ ಸಾರಿಗೆ ಮುದ್ರಣ ವೆಚ್ಚವೂ ಉಳಿತಾಯವಾಗುತ್ತದೆ ಎಂಬ ಚಿಂತನೆ ಇದೆ.