ಹುಬ್ಬಳ್ಳಿ: ಪ್ರಧಾನಿ ನರೇಂದ್ರ ಮೋದಿಯವರನ್ನು ವಿಷಸರ್ಪ ಎಂದು ವಾಗ್ದಾಳಿ ನಡೆಸಿದ್ದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮೋದಿ ನಾಲಾಯಕ್ ಎಂದು ಟೀಕಿಸಿದ್ದ ಅವರ ಪುತ್ರ ಪ್ರಿಯಾಂಕ್ ಖರ್ಗೆ ವಿರುದ್ಧ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿಗಣೆಗಳು ಎಂದು ವ್ಯಂಗ್ಯವಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಕೆ.ಎಸ್. ಈಶ್ವರಪ್ಪ, ಪ್ರಧಾನಿ ಮೋದಿಯವರನ್ನು ವಿಷಸರ್ಪಕ್ಕೆ ಹೋಲಿಸಿದಾಗಲೇ ಮಲ್ಲಿಕಾರ್ಜುನ ಖರ್ಗೆ ಅವರ ಜೀವನ ಸಾಧನೆ ಮಣ್ಣುಪಾಲಾಯ್ತು. ಅವರ ಮಗ ಪ್ರಿಯಾಂಕ್ ಖರ್ಗೆ ಕೂಡ ಪ್ರಧಾನಿ ಮೋದಿಯವರನ್ನು ಬೈದಿದ್ದಾರೆ. ಇದು ಆನೆ ಗಾತ್ರದ ಮೋದಿ ಬಗ್ಗೆ ತಿಗಣೆ ಗಾತ್ರದ ಪ್ರಿಯಾಂಕ್ ಖರ್ಗೆ ಮಾತನಾಡಿದ ಹಾಗೆ ಎಂದು ತಿರುಗೇಟು ನೀಡಿದರು.
ಪ್ರಧಾನಿ ಮೋದಿ ಆನೆಯಂತೆ ರಾಜ ಗಾಂಭೀರ್ಯವಿರುವವರು. ಇಡೀ ವಿಶ್ವವೇ ಮೆಚ್ಚಿದ ನಾಯಕ. ಅವರ ಮುಂದೆ ತಿಗಣೆ ಗಾತ್ರದ ಪ್ರಿಯಾಂಕ ಖರ್ಗೆ ಎಲ್ಲಿ ಎಂದು ವಾಗ್ದಾಳಿ ನಡೆಸಿದರು.
ಬಜರಂಗದಳ ನಿಷೇಧ ಮಾಡುವುದಾಗಿ ಹೇಳಿರುವ ಕಾಂಗ್ರೆಸ್ ನವರಲ್ಲಿಯೇ ಗೊಂದಲ ಇದೆ. ಭಾರತೀಯ ಸಂಸ್ಕೃತಿ ರಕ್ಷಣೆಗಿರುವ ಸಂಘಟನೆ ಬಜರಂಗದಳ. ಇಂತಹ ಸಂಘಟನೆಯನ್ನು ಪಿಎಫ್ಐ ಗೆ ಹೋಲಿಸಿದ್ದು ದೊಡ್ಡ ದುರಂತ ಎಂದು ವಾಗ್ದಾಳಿ ನಡೆಸಿದ್ದಾರೆ.