
ಉತ್ತರ ಪ್ರದೇಶದ RERA, 13 ರಿಯಲ್ ಎಸ್ಟೇಟ್ ಡೆವಲಪರ್‌ಗಳಿಗೆ ಭಾರೀ ದಂಡ ವಿಧಿಸಿದೆ. ಪ್ರಾಧಿಕಾರ ಸಾಕಷ್ಟು ಸಮಯವನ್ನು ನೀಡಿದ್ದರೂ ಸಹ ಆದೇಶಗಳನ್ನು ಅನುಸರಿಸದ್ದಕ್ಕೆ ಸುಮಾರು 1.39 ಕೋಟಿ ರೂಪಾಯಿ ದಂಡ ವಿಧಿಸಲಾಗಿದೆ.
ರಾಜೀವ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ RERA 104 ನೇ ಸಭೆಯಲ್ಲಿ, ಪ್ರವರ್ತಕರು ಆದೇಶ ಅನುಸರಿಸಿದ್ದಾರೋ ಇಲ್ಲವೋ ಎಂಬುದನ್ನು ಪರಿಶೀಲಿಸಲಾಯ್ತು. ಆದೇಶ ಪಾಲಿಸದ ಡೆವಲಪರ್‌ಗಳಿಗೆ ದಂಡ ಹಾಕಲಾಗಿದೆ. ಪ್ರಾಧಿಕಾರವು ತನ್ನ ಆದೇಶ ಜಾರಿಯನ್ನು ಖಚಿತಪಡಿಸಿಕೊಳ್ಳುವುದರ ಜೊತೆಗೆ ನೊಂದವರಿಗೆ ತ್ವರಿತ ನ್ಯಾಯ ಒದಗಿಸಲು ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ.
ಹಾಗಾಗಿಯೇ ತಪ್ಪಿತಸ್ಥ ಡೆವಲಪರ್‌ಗಳ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ ಅಂತಾ ರೇರಾ ಹೇಳಿದೆ. RERA ಕಾಯಿದೆಯ ಸೆಕ್ಷನ್ 38/63ರ ಅಡಿಯಲ್ಲಿ ತನ್ನ ಅಧಿಕಾರವನ್ನು ಬಳಸಿಕೊಂಡು ಪ್ರಾಧಿಕಾರ, ಯೋಜನೆಯ ವೆಚ್ಚದ ಶೇ.5ರಷ್ಟು ದಂಡ ಹಾಕಿದೆ. SRB ಪ್ರಮೋಟರ್ಸ್ ಪ್ರೈವೇಟ್ ಲಿಮಿಟೆಡ್, ಗಾರ್ಡೆನಿಯಾ ಇಂಡಿಯಾ ಪ್ರಮೋಟರ್ಸ್ ಪ್ರೈವೇಟ್ ಲಿಮಿಟೆಡ್, ಅರ್ಥ್ಕಾನ್ ಕನ್‌ಸ್ಟ್ರಕ್ಷನ್ ಪ್ರೈವೇಟ್ ಲಿಮಿಟೆಡ್, ಔರಾ ಬಿಲ್ಡ್‌ವೆಲ್ ಪ್ರೈವೇಟ್ ಲಿಮಿಟೆಡ್ ಮತ್ತು AIMS ಗಾಲ್ಫ್ ಟೌನ್ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ಗೆ ದಂಡ ಹಾಕಲಾಗಿದೆ.
ಪ್ರಾಧಿಕಾರದ ಆದೇಶ ಅನುಸರಣೆ ವರದಿಯನ್ನು 15 ದಿನಗಳಲ್ಲಿ ಸಲ್ಲಿಸಬೇಕು ಜೊತೆಗೆ ದಂಡದ ಮೊತ್ತವನ್ನು 30 ದಿನಗಳಲ್ಲಿ ಠೇವಣಿ ಮಾಡುವಂತೆ ಡೆವಲಪರ್‌ಗಳಿಗೆ ಸೂಚಿಸಲಾಗಿದೆ. ಇಲ್ಲದಿದ್ದರೆ ದಂಡದ ಮೊತ್ತವನ್ನು ಭೂಕಂದಾಯದ ಬಾಕಿಯಾಗಿ ವಸೂಲು ಮಾಡಲಾಗುತ್ತದೆ.