ಮಣಿಕಟ್ಟನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸುತ್ತಿದ್ದ 24 ವರ್ಷದ ವಿದ್ಯಾರ್ಥಿಯನ್ನು ರಕ್ಷಿಸುವಲ್ಲಿ ಹೊಯ್ಸಳ ಪೊಲೀಸರು ಯಶಸ್ವಿಯಾಗಿದ್ದಾರೆ. ಬೆಂಗಳೂರು ದಕ್ಷಿಣದ ಕನಕಪುರ ರಸ್ತೆಯಲ್ಲಿರುವ ವಿಶ್ವ ವಿದ್ಯಾಲಯದಲ್ಲಿ ಆಹಾರ ತಂತ್ರಜ್ಞಾನ ವಿಭಾಗದಲ್ಲಿ ಈ ವಿದ್ಯಾರ್ಥಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.
ಗಾಯಾಳು ವಿದ್ಯಾರ್ಥಿ ಸಾರಕ್ಕಿ ಬಳಿಯ ಪಿಜಿಯಲ್ಲಿ ನೆಲೆಸಿದ್ದು ಪುಣೆ ಮೂಲದವನಾಗಿದ್ದಾನೆ. ಈತ ತನ್ನ ಸ್ನೇಹಿತರಿಗೆ ನಾನು ಸಾಯುತ್ತಿದ್ದೇನೆ ಎಂದು ಮೆಸೇಜ್ ಮಾಡಿದ್ದ ಎನ್ನಲಾಗಿದೆ. ಈ ಮೆಸೇಜ್ ಓದಿದ ಸ್ನೇಹಿತ ಕೂಡಲೇ ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದ ಎನ್ನಲಾಗಿದೆ.
ಈ ಸಂದೇಶವನ್ನು ಸಮೀಪದಲ್ಲಿಯೇ ಗಸ್ತು ತಿರುಗುತ್ತಿದ್ದ ಹೊಯ್ಸಳ ವಾಹನಕ್ಕೆ ರವಾನಿಸಲಾಗಿತ್ತು. ಜೆಪಿ ನಗರ ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ಸ್ಪೆಕ್ಟರ್ ರಮೇಶ್ ಬಿ ಹಾಗೂ ಮುಖ್ಯ ಪೇದೆ ಚಂದ್ರಶೇಖರಯ್ಯ ಇಬ್ಬರೂ ಸೇರಿ ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಯನ್ನು ಪ್ರಾಣಾಪಾಯದಿಂದ ಕಾಪಾಡಿದ್ದಾರೆ.
ಪೊಲೀಸರು ಸ್ಥಳಕ್ಕೆ ತೆರಳುವ ವೇಳೆ ವಿದ್ಯಾರ್ಥಿ ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡಿದ್ದ. ಕೂಡಲೇ ಪೊಲೀಸರು ಆ್ಯಂಬುಲೆನ್ಸ್ಗೆ ಕರೆ ಮಾಡಿದ್ದಾರೆ ಹಾಗೂ ವಿದ್ಯಾರ್ಥಿಯನ್ನು ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವಿದ್ಯಾರ್ಥಿ ಇದೀಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ.