ರಾಯಚೂರು: ಮುಂಬರುವ ಚುನಾವಣೆಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕ್ಷೇತ್ರ ಬದಲಾವಣೆ ಮಾಡಿರುವುದಕ್ಕೆ ಬಿಜೆಪಿ ನಾಯಕರು ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಆತಂಕ ಹೆಚ್ಚಾದಲ್ಲಿ ಕ್ಷೇತ್ರ ಪರ್ಯಟನೆ ಆರಂಭವಾಗುತ್ತೆ ಎಂದು ಬಿಜೆಪಿ ಉಪಾಧ್ಯಕ್ಷ ಬಿ.ವೈ.ರಾಘವೇಂದ್ರ ವ್ಯಂಗ್ಯವಾಡಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಬಿ.ವೈ.ರಾಘವೇಂದ್ರ, ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುತ್ತಿರುವುದು ಅವರ ವೈಯಕ್ತಿಕ ನಿರ್ಧಾರ. ಕ್ಷೇತ್ರದಲ್ಲಿ ಕೆಲಸ ಮಾಡಿದ್ದರೆ ಹೀಗಾಗುತ್ತಿರಲಿಲ್ಲ. ವರುಣಾ, ಚಾಮುಂಡೇಶ್ವರಿ, ಬಾದಾಮಿಯಲ್ಲಿ ಏನಾಯ್ತು? ಈಗ ಕೋಲಾರದತ್ತ ಮುಖಮಾಡಿದ್ದಾರೆ ಎಂದರು.
ಎಲ್ಲಿ ಆತಂಕಗಳು ಹೆಚ್ಚಾಗುತ್ತೋ ಆಗ ಕ್ಷೇತ್ರ ಪರ್ಯಟನೆ, ಕ್ಷೇತ್ರ ಬದಲಾವಣೆ ನಡೆಯುತ್ತದೆ. ಇದು ರಾಜಕೀಯದಲ್ಲಿ ಸಾಮಾನ್ಯ. ಸಿದ್ದರಾಮಯ್ಯನವರ ಬಗ್ಗೆ ನಮಗೆಲ್ಲರಿಗೂ ಗೌರವವಿದೆ. ಸುಮ್ಮನಿದ್ದವರನ್ನು ಏರಿಸುವ ಕೆಲಸವನ್ನು ಅವರೇ ಮಾಡುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ನವರಿಗೆ ಸೋಲಿನ ಭೀತಿ ಶುರುವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕೃತ ವಿಪಕ್ಷ ಸ್ಥಾನವನ್ನೂ ಕಳೆದುಕೊಂಡಿದೆ. ರಾಹುಲ್ ಗಾಂಧಿಯವರು ಭಾರತ್ ಜೋಡೊ ಹೆಸರಲ್ಲಿ ಕಾಂಗ್ರೆಸ್ ಜೋಡೋ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಪ್ರಾದೇಶಿಕ ಪಕ್ಷಕ್ಕಿಂತಲೂ ಕಡೆಯಾಗಿದೆ. ಹಿಮಾಚಲಪ್ರದೇಶ ಚುನಾವಣೆಯಲ್ಲಿ ಇದಕ್ಕೆ ಉತ್ತರ ಸಿಗಲಿದೆ ಎಂದು ವ್ಯಂಗ್ಯವಾಡಿದರು.