ಶೃಂಗೇರಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಶೃಂಗೇರಿ ಹಾಲಿ ಶಾಸಕರು ಹಾಗೂ ಮಾಜಿ ಶಾಸಕರ ನಡುವಿನ ವಾಗ್ಯುದ್ಧ ತಾರಕಕ್ಕೇರಿದ್ದು, ಆರೋಪ-ಪ್ರತ್ಯಾರೋಪ ಈಗ ಆಣೆ-ಪ್ರಮಾಣದವರೆಗೂ ಬಂದು ತಲುಪಿದೆ.
ಬಿಜೆಪಿ ಮಾಜಿ ಶಾಸಕ ಡಿ.ಎನ್. ಜೀವರಾಜ್, ಕಾಂಗ್ರೆಸ್ ಹಾಲಿ ಶಾಸಕ ಟಿ.ಡಿ. ರಾಜೇಗೌಡ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪ ಮಾಡಿದ್ದರು. ತನ್ನ ವಿರುದ್ಧದ ಆರೋಪ ಸುಳ್ಳು ಎಂದಿರುವ ಶಾಸಕ ರಾಜೇಗೌಡ, ಡಿ.ಎನ್. ಜೀವರಾಜ್ ಧರ್ಮಸ್ಥಳಕ್ಕೆ ಬಂದು ಪ್ರಮಾಣ ಮಾಡಲಿ ಎಂದು ಹೇಳಿದ್ದಾರೆ.
ದಿ. ಸಿದ್ಧಾರ್ಥ್ ಕುಟುಂಬದಿಂದ ರಾಜೇಗೌಡ 211 ಎಕರೆ ಕಾಫಿತೋಟ ಖರೀದಿಸಿದ್ದು, ಆಸ್ತಿ ಖರೀದಿ ವೇಳೆ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಎಂದು ಜೀವರಾಜ್ ಆರೋಪ ಮಾಡಿದ್ದರು.
ಈ ಬಗ್ಗೆ ಪ್ರತಿಕ್ರಿಯಿಸಿರುವ ಶಾಸಕ ರಾಜೇಗೌಡ, ಕಾನೂನು ಪ್ರಕಾರವೇ ಆಸ್ತಿ ಖರೀದಿ ಮಾಡಿದ್ದೆ. ಯಾವುದೇ ವಂಚನೆ ಮಾಡಿಲ್ಲ. ನಾನು ಖರೀದಿಸಿದ್ದು 14-15 ಕೋಟಿಯಷ್ಟು ಬೆಲೆ ಬಾಳುವ ಆಸ್ತಿ. ಆದರೆ ನನ್ನ ವಿರುದ್ಧ 270 ಕೋಟಿಯಷ್ಟು ಆಸ್ತಿ ಖರೀದಿ ಆರೋಪ ಮಾಡಿದ್ದಾರೆ. 15 ಕೋಟಿಗೂ 270 ಕೋಟಿಗೂ ವ್ಯತ್ಯಾಸ ಗೊತ್ತಿಲ್ಲವೇ? ಸರ್ಕಾರಕ್ಕೆ 80 ಕೋಟಿ ನಷ್ಟ ಮಾಡಿದ್ದೇನೆ ಎಂದಿದ್ದಾರೆ. ಈ ವಿಚಾರವನ್ನು ಇಲ್ಲಿಗೆ ಬಿಡುವುದಿಲ್ಲ. ನಾನು ನಂಬುವ ಧರ್ಮಸ್ಥಳಕ್ಕೆ ಹೋಗಿ ಕೈ ಮುಗಿಯುತ್ತೇನೆ. ದೇವರೇ ನೋಡಿಕೊಳ್ಳಲಿ. ನಾನು ತಪ್ಪು ಮಾಡಿದರೆ ನನಗೆ ತೊಂದರೆಯಾಗಲಿ. ಇಲ್ಲ ಅಪಪ್ರಚಾರ ಮಾಡಿದವರನ್ನು ದೇವರೇ ಶಿಕ್ಷಿಸಲಿ. ದಿನಾಂಕ ಸಮಯ ನಿಗದಿ ಮಾಡಿ ನಾನೇ ಬರುತ್ತೇನೆ. ದೇವರ ಸನ್ನಿಧಿಗೆ ಬಂದು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದ್ದಾರೆ.