ರಾಮನಗರ: ಜೆಡಿಎಸ್ ಮಾಜಿ ಸಂಸದ ಎಲ್.ಆರ್. ಶಿವರಾಮೇಗೌಡ ಆಡಿಯೋ ವೈರಲ್ ವಿಚಾರವಾಗಿ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ, ಇಂತವರು ಪಕ್ಷದಲ್ಲಿದ್ದರೆ ಪಕ್ಷಕ್ಕೆ ಶೋಭೆಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಮನಗರದಲ್ಲಿ ಮಾತನಾಡಿದ ಕುಮಾರಸ್ವಾಮಿ, ಶಿವರಾಮೇಗೌಡರ ಆಡಿಯೋ ಕೇಳಿದ್ದೇನೆ. ಸಂಬಂಧವೇ ಇಲ್ಲದ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಇಂತವರಿಂದ ಪಕ್ಷಕ್ಕೆ ಮುಜುಗರ. ಶಿವರಾಮೇಗೌಡರನ್ನು ಪಕ್ಷದಿಂದ ಹೊರಹಾಕಲು ಅಧ್ಯಕ್ಷರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ಈಗಾಗಲೇ ಶಿವರಾಮೇಗೌಡರಿಗೆ ನೋಟೀಸ್ ಕೊಡಲಾಗಿದೆ. ಕೋಟ್ಯಂತರ ರೂಪಾಯಿ ಹಣ ಕೊಟ್ಟಿದ್ದಾಗಿ ಮಾತನಾಡಿದ್ದಾರೆ. ಹಣ ಇವರೊಬ್ಬರೇ ಕಂಡಿಲ್ಲ, ಅದ್ಯಾರಿಗೆ ಹಣ ಕೊಟ್ಟಿದ್ದಾರೋ ಗೊತ್ತಿಲ್ಲ. ಮಾಜಿ ಸಂಸದರನ್ನು ಪಕ್ಷದಿಂದ ಹೊರಹಾಕಲಾಗುವುದು ಎಂದು ಗುಡುಗಿದ್ದಾರೆ.