ಬೆಂಗಳೂರು: ಮಂಗಳೂರಿನಲ್ಲಿ ಆಟೋದಲ್ಲಿ ನಿಗೂಢ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಾಹಿತಿ ಪಡೆದುಕೊಂಡಿದ್ದಾರೆ.
ಮಂಗಳೂರಿನ ನಾಗರಿ ಬಳಿ ನಿನ್ನೆ ಸಂಜೆ ಚಲಿಸುತ್ತಿದ್ದ ಆಟೋದಲ್ಲಿ ನಿಗೂಢ ಸ್ಫೋಟ ಸಂಭವಿಸಿತ್ತು. ಸ್ಫೋಟದ ರಭಸಕ್ಕೆ ಆಟೋದಲ್ಲಿದ್ದ ಕುಕ್ಕರ್ ಛಿದ್ರ ಛಿದ್ರಗೊಂಡಿತ್ತು. ಘಟನೆಯಲ್ಲಿ ಆಟೋ ಚಾಲಕ ಹಾಗೂ ಪ್ರಯಾಣಿಕ ಇಬ್ಬರು ಗಾಯಗೊಂಡಿದ್ದರು. ಆದರೆ ಈ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಇದೊಂದು ಉಗ್ರರ ಕೃತ್ಯ ಎಂಬುದು ಬಯಲಾಗಿದೆ.
ಸ್ವತಃ ಡಿಜಿಪಿ-ಐಜಿಪಿ ಪ್ರವೀಣ್ ಸೂದ್ ಅವರು ಮಾಹಿತಿ ನೀಡಿದ್ದು, ಆಟೋದಲ್ಲಿ ನಿಗೂಢ ಸ್ಫೋಟ ಅನಿರೀಕ್ಷಿತ ಘಟನೆಯಲ್ಲ, ಉದ್ದೇಶಪೂರ್ವಕವಾಗಿ ನಡೆಸಿದ ಉಗ್ರರ ಕೃತ್ಯ ಎಂದು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರಕರಣದ ಬಗ್ಗೆ ಡಿಜಿಪಿ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಂದ ಮಾಹಿತಿ ಪಡೆದುಕೊಂಡಿದ್ದಾರೆ.