ಬೆಂಗಳೂರು: ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆರವುಗೊಳಿಸುವಂತೆ ಹಿಂದೂಪರ ಸಂಘಟನೆಗಳು ಸರ್ಕಾರಕ್ಕೆ ನೀಡಿದ್ದ ಗಡುವು ಮುಗಿದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನಾಳೆಯಿಂದ ರಾಜ್ಯಾದ್ಯಂತ ದೇವಾಲಯಗಳಲ್ಲಿ ಸುಪ್ರಭಾತ ಅಭಿಯಾನ ನಡೆಸಲು ಸಿದ್ಧತೆ ನಡೆಸಿವೆ.
ನಾಳೆ ಮುಂಜಾನೆ 5 ಗಂಟೆಗೆ ರಾಜ್ಯದ ಸಾವಿರಕ್ಕೂ ಹೆಚ್ಚು ದೇವಾಲಯಗಳಲ್ಲಿ ದೇವರನಾಮ, ಸುಪ್ರಭಾತ ಹಾಕುವ ಮೂಲಕ ಅಭಿಯಾನ ಆರಂಭವಾಗಲಿದೆ. ಈ ಕುರಿತು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಮಾಹಿತಿ ನೀಡಿದ್ದು, ಮಸೀದಿಗಳಲ್ಲಿನ ಲೌಡ್ ಸ್ಪೀಕರ್ ತೆರವುಗೊಳಿಸುವಂತೆ ಸರ್ಕಾರಕ್ಕೆ ಗಡುವು ನೀಡಿದ್ದರು ಸೂಕ್ತ ಕ್ರಮಕ್ಕೆ ಮುಂದಾಗಿಲ್ಲ. ಹಾಗಾಗಿ ನಾಳೆಯಿಂದ ದೇವಾಲಯಗಳಲ್ಲಿ ಸುಪ್ರಭಾತ ಅಭಿಯಾನ ಆರಂಭಿಸುತ್ತೇವೆ ಎಂದಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲೆ, ನಗರ, ಗ್ರಾಮೀಣ ಪ್ರದೇಶಗಳಲ್ಲಿಯೂ ಹಿಂದೂ ಪರ ಸಂಘಟನೆ ಹಾಗೂ ಶ್ರೀರಾಮಸೇನೆ ಕಾರ್ಯಕರ್ತರು ಅಭಿಯಾನ ಆರಂಭಿಸಲಿದ್ದಾರೆ. ಮಧ್ಯಾಹ್ನ 12ರಿಂದ 2 ಗಂಟೆಯವರೆಗೆ ಭಜನೆ, ಹನುಮಾನ್ ಚಾಲೀಸಾ ಪಠಿಸಲಾಗುವುದು ಎಂದರು.
ನಾವು ಯಾವುದೇ ಧರ್ಮದ ವಿರುದ್ಧ ಹೋರಾಟ ನಡೆಸುತ್ತಿಲ್ಲ. ಆದರೆ ಮಸೀದಿ, ಮಂದಿರ, ಚರ್ಚ್ ಸೇರಿದಂತೆ ಎಲ್ಲೆಡೆ ಧ್ವನಿವರ್ಧಕಗಳನ್ನು ಇಂತಿಷ್ಟೇ ಡೆಸಿಬಲ್ ಗೆ ಸೀಮಿತಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶವಿದೆ. ಕೋರ್ಟ್ ಆದೇಶವಿದ್ದರೂ ಮಸೀದಿಗಳ ಲೌಡ್ ಸ್ಪೀಕರ್ ಗೆ ಕಡಿವಾಣ ಹಾಕಿಲ್ಲ. ಮುಂಜಾನೆಯಿಂದಲೇ ಆಜಾನ್ ಮೊಳಗಿಸುತ್ತಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೋರ್ಟ್ ಆದೇಶ ಪಾಲಿಸುವಂತೆ ಒತ್ತಾಯಿಸಿ ಹೋರಾಟ ನಡೆಸಲಿದ್ದೇವೆ ಎಂದು ಹೇಳಿದರು.
ಒಟ್ಟಾರೆ ರಾಜ್ಯದಲ್ಲಿ ಹಿಜಾಬ್, ಹಲಾಲ್, ದೇವಾಲಯಗಳ ಬಳಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ವಿವಾದ ಬೆನ್ನಲ್ಲೇ ಇದೀಗ ಆಜಾನ್ ವಿರುದ್ಧ ಹೋರಾಟ ಆರಂಭವಾಗಿದ್ದು, ಮತ್ತೊಂದು ಧರ್ಮ ಸಂಘರ್ಷಕ್ಕೆ ಕಾರಣವಾಗಲಿದೆಯೇ ಕಾದುನೋಡಬೇಕಿದೆ.