ಶಿವಮೊಗ್ಗ: ಭಾರಿ ಮಳೆಯಿಂದಾಗಿ ಆಗುಂಬೆ ಘಾಟ್ ನಲ್ಲಿ ಗುಡ್ಡಕುಸಿತವುಂಟಾಗಿದ್ದು, ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ವಾಹನ ಸಂಚಾರಕ್ಕೆ ಅಡ್ದಿಯುಂಟಾಗಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಆಗುಂಬೆ ಘಾಟ್ ನ 3, 4 ಹಾಗೂ 10ನೇ ತಿರುವಿನಲ್ಲಿ ಗುಡ್ಡ ಕುಸಿತವಾಗಿದ್ದು, ತಕ್ಷಣ ತೆರವು ಕಾರ್ಯಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ಇಂಧನ ಸಚಿವ ಸುನೀಲ್ ಕುಮಾರ್ ಸೂಚಿಸಿದ್ದಾರೆ.
ಗುಡ್ಡ ಕುಸಿತದಿಂದಾಗಿ ಹಲವು ವಾಹನಗಳು ಮಾರ್ಗ ಮಧ್ಯೆ ಸಿಲುಕಿಕೊಂಡಿದ್ದು, ಪರ್ಯಾಯ ವ್ಯವಸ್ಥೆ ಇಲ್ಲದೇ ತೊಂದರೆಗೆ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳೊಂದಿಗೆ ಮಾತುಕತೆ ನಡೆಸಿರುವ ಸಚಿವರು ಮಣ್ಣು ತೆರವು ಕಾರ್ಯಾಚರಣೆ ಚುರುಕುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಡಬೇಕು. ಭೂಕುಸಿತದಿಂದ ತೊಂದರೆಯಾದವರಿಗೆ ತಕ್ಷಣ ಪರಿಹಾರ ನಿಟ್ಟಿನಲ್ಲಿಯೂ ಕ್ರಮ ಕೈಗೊಳ್ಳುವಂತೆ ತಿಳಿಸಿದ್ದಾರೆ.
ಆಗುಂಬೆ ಘಾಟ್ ನಲ್ಲಿ ಸಂಜೆಯೊಳಗಾಗಿ ಸಂಚಾರ ಯಥಾಸ್ಥಿತಿಗೆ ಬರಬೇಕು ಎಂದು ಸಚಿವರು ಕಟ್ಟುನಿಟ್ಟಾಗಿ ಆದೇಶ ನೀಡಿದ್ದಾರೆ.