ಬೆಂಗಳೂರು: ಉದಯಪುರ ಸಂಕಲ್ಪ ಶಿಬಿರದಲ್ಲಿ ಚರ್ಚಿಸಿ ತೀರ್ಮಾನಿಸಿದಂತೆಯೇ ರಾಜ್ಯದಲ್ಲಿಯೂ ನವ ಸಂಕಲ್ಪ ಚಿಂತನಾ ಶಿಬಿರ ನಡೆಸಲಾಗುತ್ತಿದೆ. ಇದೊಂದು ಐತಿಹಾಸಿಕ ಕಾರ್ಯಕ್ರಮ. ಆಗಸ್ಟ್ 2 ರಂದು ಜವಾಬ್ದಾರಿ ತೆಗೆದುಕೊಂಡಾಗ ನಾನು ಹೇಳಿದ್ದೆ, ಜೊತೆಗೂಡುವುದು ಆರಂಭ, ಜೊತೆಗೂಡಿ ನಡೆಯುವುದು, ಜೊತೆಗೂಡಿ ಕೆಲಸ ಮಾಡುವುದು ಯಶಸ್ಸು ಈ ನಿಟ್ಟಿನಲ್ಲಿ ಕಾಂಗ್ರೆಸ್ ಮತ್ತೊಂದು ಪಾದಯಾತ್ರೆಗೆ ಸಿದ್ಧವಾಗಬೇಕಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಬೆಂಗಳೂರಿನ ದೇವನಹಳ್ಳಿ ಬಳಿ ನಡೆದ ಕಾಂಗ್ರೆಸ್ ನವ ಸಂಕಲ್ಪ ಶಿಬಿರದಲ್ಲಿ ಮಾತನಾಡಿದ ಡಿ.ಕೆ. ಶಿವಕುಮಾರ್, ಎಐಸಿಸಿ ನಿರ್ದೇಶನದಂತೆ ಆಗಸ್ಟ್ 9 ರಿಂದ 15 ರವರೆಗೆ ರಾಜ್ಯಾದ್ಯಂತ ತ್ರಿವರ್ಣ ಧ್ವಜ ಹಿಡಿದು ಪಾದಯಾತ್ರೆ ನಡೆಸಲಾಗುವುದು. ಬೆಂಗಳೂರಲ್ಲಿ ಆಗಸ್ಟ್ 15ರಂದು ನಡೆಸಲು ಚಿಂತನೆ ನಡೆಸಲಾಗಿದೆ. ಈ ಪಾದಯಾತ್ರೆಗೆ ಪಕ್ಷದ ಪ್ರತಿಯೊಬ್ಬರೂ ಸಿದ್ಧಗೊಳ್ಳಬೇಕಿದೆ ಎಂದು ಕರೆ ನೀಡಿದರು.
ವಿಧಾನಸಭಾ ಚುನಾವಣೆ ಹಾಗೂ ಲೋಕಸಭಾ ಚುನಾವಣೆಗೆ ತಯಾರಿ ನಿಟ್ಟಿನಲ್ಲಿ ಪಕ್ಷ ಸಂಘಟನೆಗಾಗಿ ಪಾದಯಾತ್ರೆ ಕೈಗೊಳ್ಳುವುದು ಮಹತ್ವದ್ದಾಗಿದೆ. ಚುನಾವಣೆಗಾಗಿ ಎಲ್ಲಾ ಜಿಲ್ಲೆಗಳು, ಬೆಂಗಳೂರು ನಗರ, ಮೈಸೂರು ವಿಭಾಗ, ಕರಾವಳಿ ವಿಭಾಗ ಸೇರಿದಂತೆ ಎಲ್ಲ ವಿಭಾಗಗಳಿಗೆ ಪ್ರತ್ಯೇಕ ಪ್ರಣಾಳಿಕೆಗಳನ್ನು ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಇಂದು ಜನತೆ ಕಷ್ಟದಲ್ಲಿದ್ದಾರೆ, ರೈತರು, ಮಹಿಳೆಯರು ಸೇರಿದಂತೆ ಎಲ್ಲಾ ವರ್ಗದ ಜನರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಜನರ ಪರವಾಗಿ ನಾವು ಕಾರ್ಯಕ್ರಮಗಳನ್ನು ರೂಪಿಸಬೇಕಿದೆ. ಬಿಜೆಪಿ ಬಗ್ಗೆ ಮಾತನಾಡಿ ಕಾಲಹರಣ ಮಾಡುವುದು ಬೇಡ. ಕಾರ್ಯಕರ್ತರು ಒಗ್ಗಟ್ತಿನಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು.