ಬೆಳಗಾವಿ: ಕಾಂಗ್ರೆಸ್ ಯುವ ನಾಯಕಿ ನವ್ಯಶ್ರೀ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ರಾಜಕುಮಾರ್ ಟಾಕಳೆ, ಆಕೆ ನನ್ನ ಹೆಂಡತಿಯಲ್ಲ, ಮದುವೆಯಾದ ಬಗ್ಗೆ ಸಾಕ್ಷಿಯೇ ಇಲ್ಲ ಎಂದು ಹೇಳಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ, ನವ್ಯಶ್ರೀ ನನ್ನ ಹೆಂಡತಿಯಲ್ಲ. ಅವರು ಪದೇ ಪದೇ ನನ್ನನ್ನು ಗಂಡ ಎಂದು ಹೇಳುತ್ತಿರುವುದು ಯಾಕೆ? ನನಗೆ ಕಳೆದ 3-4 ತಿಂಗಳಿಂದ ನವ್ಯಶ್ರೀ ಮಾನಸಿಕ ಹಿಂಸೆ ನೀಡುತ್ತಿದ್ದಾಳೆ. ನನಗೆ ಹೆಂಡತಿ, ಮಕ್ಕಳು ಇದ್ದಾರೆ ಆದರೆ ನವ್ಯಶ್ರಿ ನನ್ನ ಪತ್ನಿ ಅಲ್ಲ, ನಾವಿಬ್ಬರು ಮದುವೆಯೇ ಆಗಿಲ್ಲ ಎಂದು ಹೇಳಿದರು.
ನವ್ಯಶ್ರೀ ಕಷ್ಟ ಎಂದು ಹೇಳಿದ್ದಕ್ಕೆ ನಾನು ಸ್ಪಂದಿಸಿದ್ದೆ. ಮಾನವೀಯತೆ ದೃಷ್ಟಿಯಿಂದ ನಮ್ಮ ಸಮಾಜದವರು ಎಂಬ ಕಾರಣಕ್ಕೆ ಮನೆಯಲ್ಲಿಯೇ ಇಟ್ಟುಕೊಳ್ಳುತ್ತೇನೆ ಎಂದಿದ್ದೆ. 2 ಲಕ್ಷ ರೂಪಾಯಿ ಹಣವನ್ನು ನೀಡಿದ್ದೆ. ಆದರೆ ನವ್ಯಶ್ರೀ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾರೆ. ಇದರಿಂದ ಮಾನಸಿಕವಾಗಿ ಹಿಂಸೆಯಾಗಿದೆ. ನನ್ನ ಪತ್ನಿ ಹಾಗೂ ಮಕ್ಕಳು ನನ್ನ ಜತೆ ಇದ್ದಾರೆ. ಅವರ ಸಹಕಾರದಿಂದಲೇ ಎಪಿಎಂಸಿ ಠಾಣೆಯಲ್ಲಿ ದೂರು ದಾಖಲಿಸಿದ್ದೇನೆ ಎಂದರು.
ಇದೀ ವೇಳೆ ಆಡಿಯೋ ವಿಚಾರವಾಗಿ ಮಾತನಾಡಿದ ರಾಜಕುಮಾರ್, ಆಡಿಯೋದಲ್ಲಿ ನಾನು ಎಲ್ಲಿಯೂ ನವ್ಯಶ್ರೀ ಪತ್ನಿ ಎಂದಿಲ್ಲ, ಇನ್ನು ಆ ವೇಳೆ ಮಾತನಾಡುವಾಗ ನನ್ನ ಪತ್ನಿ ಜತೆಯಲ್ಲಿಯೇ ಇದ್ದರು. ನವ್ಯಶ್ರೀ ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡದರು ನನಗೆ ತೊಂದರೆಯಿಲ್ಲ. ಜನರಿಗೆ ಸತ್ಯವೇನು ಎಂಬುದು ಗೊತ್ತಾಗಲಿ. ಈ ರೀತಿ ಯಾರೂ ಬ್ಲ್ಯಾಕ್ ಮೇಲ್ ಗೆ ಒಳಗಾಗಬಾರದು. ತನಿಖೆಯಾಗಲಿ, ಸತ್ಯಾಸತ್ಯತೆ ಹೊರಬರಲಿ ಎಂಬ ಕಾರಣಕ್ಕೆ ದೂರು ನೀಡಿದ್ದೇನೆ ಎಂದು ಹೇಳಿದರು.