ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ 108 ಆಂಬುಲೆನ್ಸ್ ಸೇವೆ ಸ್ಥಗಿತಗೊಂಡಿದ್ದು, ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಗೆ ದಾಖಲಾಗಬೇಕಿದ್ದ ಮಹಿಳೆಯೊಬ್ಬರು ಆಂಬುಲೆನ್ಸ್ ಸಿಗದೇ ಸಾವನ್ನಪ್ಪಿರುವ ಘಟನೆ ತುಮಕೂರಿನಲ್ಲಿ ನಡೆದಿದೆ.
ಸಕಾಲಕ್ಕೆ ಆಂಬುಲೆನ್ಸ್ ಸಿಗದ ಪರಿಣಾಮ ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಐಡಿಹಳ್ಳಿಯ 65 ವರ್ಷದ ಜಯಮ್ಮ ಸಾವನ್ನಪ್ಪಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮ ಅವರನ್ನು ಆಸ್ಪತ್ರೆಗೆ ದಾಖಲಿಸಲು ಕುಟುಂಬದವರು 108 ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಆದರೆ ಕರೆ ಮಾಡಿ ಒಂದು ಗಂಟೆಗೂ ಹೆಚ್ಚು ಕಾಲ ಕಳೆದರೂ ಆಂಬುಲೆನ್ಸ್ ಬಂದಿಲ್ಲ. ಮಧುಗಿರಿ ತಾಲೂಕು ಆರೋಗ್ಯಾಧಿಕಾರಿಗೆ ಕರೆ ಮಾಡಿದ ಜಯಮ್ಮ ಕುಟುಂಬ ಆಂಬುಲೆನ್ಸ್ ಸಮಸ್ಯೆ ಬಗ್ಗೆ ಹೇಳಿದ್ದಾರೆ.
ಬಳಿಕ ಐಡಿಹಳ್ಳಿಗೆ ಆಂಬುಲೆನ್ಸ್ ಬಂದಿದೆ. ಆಂಬುಲೆನ್ಸ್ ಬರುವ ಮೊದಲೇ ಜೀವನ್ಮರಣದ ಮಧ್ಯೆ ಹೋರಾಡುತ್ತಿದ್ದ ಜಯಮ್ಮ ಉಸಿರು ಚೆಲ್ಲಿದ್ದಾರೆ. ಸರಿಯಾದ ಸಮಯಕ್ಕೆ ಆಂಬುಲೆನ್ಸ್ ಬಂದಿದ್ದರೆ ಜಯಮ್ಮರ ಪ್ರಾಣ ಉಳಿಯುತ್ತಿತ್ತು ಎಂದು ಜನಪ್ರತಿನಿಧಿಗಳು, ಜಿಲ್ಲಾಡಳಿತದ ವಿರುದ್ಧ ಜಯಮ್ಮ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.