ಬೆಂಗಳೂರು: ಮಂಗಳೂರಿನ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿಯನ್ನು ತನಿಖೆ ನಡೆಸದೇ ಉಗ್ರ ಎಂದು ಹೇಗೆ ಘೋಷಿಸಿದಿರಿ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿಕೆ ರಾಜ್ಯ ರಾಜಕೀಯದಲ್ಲಿ ತೀವ್ರ ಸಂಘರ್ಷಕ್ಕೆ ಕಾರಣವಾಗಿದೆ. ಡಿ.ಕೆ. ಶಿವಕುಮಾರ್ ಹೇಳಿಕೆಯನ್ನು ಖಂಡಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ ಜವಾಬ್ದಾರಿಯುತವಾದ ಸ್ಥಾನದಲ್ಲಿರುವವರು ಆಡುವ ಮಾತಲ್ಲ ಇದು ಎಂದು ಕಿಡಿ ಕಾರಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೃಹ ಸಚಿವರು, ಡಿ.ಕೆ. ಶಿವಕುಮಾರ್ ಹೇಳಿಕೆ ನೋಡಿ ನನಗೆ ತುಂಬಾ ನೋವಾಯಿತು. ಆಂತರಿಕ ಭದ್ರತೆ ವಿಚಾರ ಇದು. ಡಿ.ಕೆ. ಶಿವಕುಮಾರ್ ಅವರು ರಾಜಕೀಯವನ್ನು ಬಿಟ್ಟು ಯೋಚನೆ ಮಾಡಬೇಕು ಎಂದು ಹೇಳಿದರು.
ಡಿ.ಕೆ. ಶಿವಕುಮಾರ್ ಮಂತ್ರಿಯಾಗಿ ಸರ್ಕಾರವನ್ನು ನಡೆಸಿದವರು. ಇಂತಹ ಹೇಳಿಕೆ ನಮ್ಮ ಪೊಲೀಸರನ್ನು ದುರ್ಬಲಗೊಳಿಸುವ ಯತ್ನವಿದು. ಮಂಗಳೂರು ಬಾಂಬ್ ಸ್ಫೋಟದ ಆರೋಪಿ ಶಾರಿಕ್ ಬಗ್ಗೆ ಪೊಲೀಸರಿಗೆ ಗೊತ್ತಿದೆ. ಆತನನ್ನು ಪೊಲೀಸರು ಹುಡುಕುತ್ತಿದ್ದರು. ಡಿ.ಕೆ. ಶಿವಕುಮಾರ್ ಜವಾಬ್ದಾರಿಯುತವಾಗಿ ಮಾತನಾಡಲಿ ಎಂದು ಗುಡುಗಿದರು.