ಮೈಸೂರು: ಕೋವಿಡ್ ಸಂಕಷ್ಟದ ನಡುವೆ ಜನರು ಪರದಾಡುತ್ತಿದ್ದರೂ ಮೈಸೂರಿನಲ್ಲಿ ಇಬ್ಬರು ಮಹಿಳಾ ಐಎಎಸ್ ಅಧಿಕಾರಿಗಳ ನಡುವಿನ ಕಿತ್ತಾಟ ಮುಂದುವರೆದಿದ್ದು, ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್ ಆರೋಪಕ್ಕೆ ಇದೀಗ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿರುಗೇಟು ನೀಡಿದ್ದಾರೆ.
ಜಿಲ್ಲಾಧಿಕಾರಿ ರೋಹಿಣಿ ಕಾರ್ಯವೈಖರಿ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿ ರಾಜೀನಾಮೆ ನೀಡಿದ್ದಾಗಿ ಪಾಲಿಕೆ ಆಯುಕ್ತೆ ಶಿಲ್ಪಾ ಆರೋಪಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಡಿಸಿ ರೋಹಿಣಿ, ನನ್ನ ಕಾರ್ಯವೈಖರಿ ಬಗ್ಗೆ ಅಸಮಾಧಾನ, ಬೇಸರವಿದ್ದರೆ ಕಾನೂನು ಪ್ರಕಾರ ದೂರು ನೀಡಲಿ ಅದನ್ನು ಬಿಟ್ಟು ಅನಗತ್ಯ ಆರೋಪ ಮಾಡುವುದು ಸರಿಯಲ್ಲ ಎಂದಿದ್ದಾರೆ.
ಎಲ್ಲಾ ಅಧಿಕಾರಿಗಳು ಒತ್ತಡದಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಸಿಎಸ್ಆರ್ ಫಂಡ್ ಲೆಕ್ಕ ಕೇಳಿದ್ದಕ್ಕೆ ಶಿಲ್ಪಾ ನಾಗ್ ಆರೋಪ ಮಾಡುತ್ತಿದ್ದಾರೆ. ವಾರ್ಡ್ ವೈಸ್ ಅಂಕಿ-ಅಂಶಗಳನ್ನು ಕೇಳಿದ್ದೆ. ಆಯಾ ವಾರ್ಡ್ ನಲ್ಲಿರುವ ಕೋವಿಡ್ ಪಾಸಿಟಿವ್ ಸಂಖ್ಯೆ ಹಾಗೂ ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ಕೇಳಿದ್ದೆ. ಒಂದು ದಿನ 400 ಕೊರೊನಾ ಪ್ರಕರಣ, ಮತ್ತೊಂದು ದಿನ 40 ಪ್ರಕರಣ ಎಂದು ವರದಿ ನೀಡಿದ್ದಾರೆ. ಈ ರೀತಿ ಹೇಳಿದರೆ ಸರಿಯಿಲ್ಲ ಸೂಕ್ತವಾಗಿ ವರದಿ ಕೊಡುವಂತೆ ಸೂಚಿಸಿದ್ದೆ. ಇಷ್ಟಕ್ಕೂ ಶಿಲ್ಪಾ ನಾಗ್ ಪಾಲಿಕೆಗೆ ಬಂದು ಒಂದು ವರ್ಷವಾಗುತ್ತಿದೆ. ಈವರೆಗೆ ಇಲ್ಲದ ದೂರು ಒಂದು ವಾರದಿಂದ ಆರಂಭವಾಗಿರುವುದು ಯಾಕೆ? ನಾನು ಪ್ರತಿಯೊಂದು ಮಾಹಿತಿಯನ್ನೂ ಮುಖ್ಯಕಾರ್ಯದರ್ಶಿಗೆ ನೀಡುತ್ತೇನೆ ಎಂದು ಹೇಳಿದ್ದಾರೆ.