ಬೆಂಗಳೂರು: ಕುರುಬ ಸಮಾಜದವರ ಬಗ್ಗೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಬಹಳ ಪ್ರೀತಿ ಬಂದಿದೆ. ಹಾಗಾಗಿ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಈಶ್ವರಪ್ಪ ಅವರನ್ನು ಸಿಎಂ ಮಾಡಲಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ನಾಯಕರು ಮೀಸಲಾತಿ ಹೆಚ್ಚಳದ ವಿರೋಧಿಗಳು ಈಗ ಚುನಾವಣೆ ಸಮೀಪಿಸುತ್ತಿರುವುದರಿಂದ ಮೀಸಲಾತಿ ಹೆಚ್ಚಳ ಮಾಡಿದ್ದಾರೆ. ಇದೆಲ್ಲ ಚುನಾವಣೆ ಗಿಮಿಕ್ ಅಷ್ಟೇ ಎಂದರು.
ಸಿದ್ದರಾಮಯ್ಯಗೆ ಕುರುಬರ ಮೇಲೆ ಕಾಳಜಿ ಇಲ್ಲ. ಕುರುಬ ಸಮುದಾಯವನ್ನು ಸಿದ್ದರಾಮಯ್ಯ ಬೆಳೆಸಿಲ್ಲ ಎಂಬ ಸಿಎಂ ಬೊಮ್ಮಾಯಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಾನು ಕುರುಬ ಸಮುದಾಯದವನು ನಾನು ಸಿಎಂ ಆಗಿಲ್ವಾ? ಬೊಮ್ಮಾಯಿ ಅವರು ಹಿಂದುಳಿದ ವರ್ಗದ ಸಮಾವೇಶದಲ್ಲಿ ಕುರುಬರಿಗೆ ಉಪಕಾರ ಮಾಡಿದ್ದೇನೆ ಎಂದು ಆದೇಶದ ಪ್ರತಿ ಪ್ರದರ್ಶಿಸಿದರು. ಎನ್ ಟಿಸಿಯಿಂದ ಶೇ.50ರಷ್ಟು ಸಾಲ ನೀಡುವುದಾಗಿಯೂ ದಾಖಲೆ ಪ್ರದರ್ಶಿಸಿದರು. ಇದರಲ್ಲಿ ಶೇ.25ರಷ್ಟು ಸಾಲ ಸರ್ಕಾರ ನೀಡಿದರೆ ಇನ್ನುಳಿದ ಶೇ.25ರಷ್ಟನ್ನು ಫಲಾನುಭವಿಗಳೇ ಹಾಕಿಕೊಳ್ಳಬೇಕು. ನಾನೂ ಕೂಡ ಆದೇಶ ಪ್ರತಿ ಓದಿದ್ದೇನೆ. ಇದನ್ನು ಸಂಪುಟ ಸಭೆಯಲ್ಲಿಯೂ ಪ್ರಸ್ತಾಪ ಮಾಡದೇ ತರಾತುರಿಯಲ್ಲಿ ಸಮಾವೇಶಕ್ಕೆ ತೆಗೆದುಕೊಂಡು ಹೋಗಿ ಪ್ರದರ್ಶಿಸಿದ್ದಾರೆ. ಈ ಯೋಜನೆ ಅನುಷ್ಠಾನಕ್ಕೆ ಬರುವುದೂ ಇಲ್ಲ. ಎಲ್ಲಾ ಚುನಾವಣೆಗಾಗಿ ಗಿಮಿಕ್ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವಧಿಯಲ್ಲಿ ಕುರುಬರು ಮಂತ್ರಿಯಾಗಿಲ್ಲ ಎಂದು ಬೊಮ್ಮಾಯಿ ಹೇಳಿದ್ದಾರೆ. ಹೆಚ್.ಎಂ.ರೇವಣ್ಣ, ಎಂಟಿಬಿ ನಾಗರಾಜ್ ಸಚಿವರಾಗಿರಲಿಲ್ಲವೇ? ಪ್ರಮೋದ್ ಮಧ್ವರಾಜ್, ವಿನಯ್ ಕುಮಾರ್ ಸೊರಕೆ, ಕಾಗೋಡು ತಿಮ್ಮಪ್ಪ, ಚಿಂಚನಸೂರ, ಪುಟ್ಟರಂಗಶೆಟ್ಟಿ ಇವರೆಲ್ಲ ಹಿಂದುಳಿದವರಲ್ವಾ? ಸ್ವತಃ ನಾನೇ ಕುರುಬ ಸಮುದಾಯದವನು ನಾನು ಸಿಎಂ ಆಗಿರಲಿಲ್ವಾ? ಹಿಂದುಳಿದವರು ಸಿಎಂ ಆಗಿರುವುದು ಇಂದಿಗೂ ಕಾಂಗ್ರೆಸ್ ನಲ್ಲಿ ಮಾತ್ರ. ಈಗ ಬಿಜೆಪಿಯವರಿಗೆ, ಬೊಮ್ಮಾಯಿ ಅವರಿಗೆ ಕುರುಬರ ಬಗ್ಗೆ ಬಹಳ ಪ್ರೀತಿ ಬಂದಿದೆ. ಬೊಮ್ಮಾಯಿ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ. ಅಷ್ಟು ಕಾಳಜಿ ಇದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಈಶ್ವರಪ್ಪನವರನ್ನು ಸಿಎಂ ಮಾಡಲಿ ನೋಡೋಣ ಎಂದು ಗುಡುಗಿದ್ದಾರೆ.