ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪೆರ್ನೆ ಗ್ರಾಮದಲ್ಲಿ ಸಂಭವಿಸುತ್ತಿದ್ದ ಸಾಲು ಸಾಲು ದುರಂತಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಗ್ರಾಮಸ್ಥರು ಅಷ್ಟಮಂಗಲ ಪ್ರಶ್ನೆ ಮೊರೆ ಹೋಗಿದ್ದು, ಈ ವೇಳೆ ಕೆಲವು ಅಚ್ಚರಿ ವಿಚಾರಗಳು ಬಯಲಾಗಿವೆ.
ಪೆರ್ನೆ ಗ್ರಾಮದಲ್ಲಿ ಸಂಭವಿಸುತ್ತಿದ್ದ ಮನುಷ್ಯರ ಹಾಗೂ ನಾಗರ ಹಾವುಗಳ ಸರಣಿ ಸಾವು, ಹಲವು ಅಸಹಜ ಸಾವು, ವಿಚಿತ್ರ ಘಟನೆಗಳಿಗೆ 500 ವರ್ಷಗಳ ಹಿಂದೆ ಪೂಜಿಸಲಾಗುತ್ತಿದ್ದ ದೈವ ದೇವರ ನಿರ್ಲಕ್ಷವೇ ಕಾರಣ ಎಂಬ ವಿಚಾರ ಅಷ್ಟಮಂಗಲ ಪ್ರಶ್ನೆಯಲ್ಲಿ ಗೊತ್ತಾಗಿದೆ.
ಪೆರ್ನೆ ಕ್ರಾಸ್ ನಲ್ಲಿ ಈ ಹಿಂದೆ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ 11 ಜನರು ಸಾವನ್ನಪ್ಪಿದ್ದರು. ಗ್ರಾಮದ ಸುತ್ತಮುತ್ತಲು ಜನರು ಖಿನ್ನತೆಗಳಿಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗುವುದು, ಹಾಗೂ ಹಲವು ಅಸಹಜ ಸಾವುಗಳು ಸಂಭವಿಸುತ್ತಿದ್ದವು. ಒಂದು ವಾರದಲ್ಲಿ ಇಬ್ಬರು ಅಪಘಾತದಲ್ಲಿ ಸಾವನ್ನಪ್ಪುವಂತಹ ಘಟನೆಗಳು ನಡೆಯುತ್ತಿದ್ದವು.
ಅಷ್ಟೇ ಅಲ್ಲ ಇನ್ನೊಂದು ವಿಚಿತ್ರವೆಂದರೆ ಒಂದರ ಹಿಂದೊಂದರಂತೆ 13 ನಾಗರ ಹಾವುಗಳ ಸರಣಿ ಸಾವು ಸಂಭವಿಸಿತ್ತು. ಒಂದು ನಾಗರ ಹಾವು ಸಾವನ್ನಪ್ಪಿದ ಬಳಿಕ ಸರ್ಪಸಂಸ್ಕಾರಾದಿಗಳನ್ನು ನೆರವೇರಿಸಿ ಎರಡು ದಿನ ಕಳೆಯುವಷ್ಟರಲ್ಲಿ ಇನ್ನೊಂದು ನಾಗರ ಹಾವು ಸಾವನ್ನಪ್ಪುತ್ತಿತ್ತು. ಇಂತಹ ಘಟನೆಗಳಿಂದ ಗ್ರಾಮದ ಜನರು ಆತಂಕಕ್ಕೀಡಾಗಿದ್ದರಲ್ಲದೇ ದಿಕ್ಕೇ ತೋಚದೇ ಅಂತಿಮವಾಗಿ ಅಷ್ಟಮಂಗಲ ಪ್ರಶ್ನೆ ಕೇಳಬೇಕು ಎಂಬ ನಿರ್ಧಾರಕ್ಕೆ ಬಂದಿದ್ದಾಗಿ ಪೆರ್ನೆ ಗ್ರಾಮಸ್ಥರು ತಿಳಿಸಿದ್ದಾರೆ.
ಇದೀಗ ಅಷ್ಟಮಂಗಲ ಪ್ರಶ್ನೆಯಲ್ಲಿ ದೈವ ನಿರ್ಲಕ್ಷವೇ ಗ್ರಾಮದಲ್ಲಿನ ದುರಂತಕ್ಕೆ ಕಾರಣ. ದೇವಸ್ಥಾನದ ಜೀರ್ಣೋದ್ಧಾರ ಮಾಡಬೇಕು ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ದೇವಸ್ಥಾನ ಜೀರ್ಣೋದ್ಧಾರಕ್ಕೆ ಮುಂದಾಗಿದ್ದು, ಫೆಬ್ರವರಿಯಿಂದ ದೇಗುಲ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಅಲ್ಲದೇ ಅಷ್ಟಮಂಗಲ ಪ್ರಶ್ನೆ ಬಳಿಕ ಗ್ರಾಮದಲ್ಲಿ ಒಳಿತಾಗುತ್ತಿರುವುದಾಗಿ ಹೇಳಿದ್ದಾರೆ.