ಬೀದರ್: ಕಾಂಗ್ರೆಸ್ ನಾಯಕರು ನನ್ನನ್ನು ತೆಗಳುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ, ಅವರು ನಿಂದಿಸುತ್ತಾ ಇರಲಿ ನಾನು ಜನತಾ ಜನಾರ್ಧನನ ಸೇವೆಯನ್ನು ಮಾಡುತ್ತಾ ಇರುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟಾಂಗ್ ನೀಡಿದ್ದಾರೆ.
ಬೀದರ್ ಜಿಲ್ಲೆಯ ಹುಮ್ನಾಬಾದ್ ನಲ್ಲಿ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ನಾಯಕರು ಆಡಳಿತ ಪಕ್ಷದವರ ವಿರುದ್ಧ ಬೈಯ್ಯುವುದರಲ್ಲಿಯೇ ಕಾಲ ಕಳೆಯುತ್ತಿದ್ದಾರೆ ಎಂದರು.
ಕಾಂಗ್ರೆಸ್ ನವರು ಈವರೆಗೆ ನನ್ನನ್ನು 91 ಬಾರಿ ಬೈದಿದ್ದಾರೆ. ಮೊದಲು ನನ್ನನ್ನು ಚೌಕಿದಾರ್ ಚೋರ್ ಎಂದರು. ಈಗ ಅನಗತ್ಯ ಆರೊಪ ಮಾಡುತ್ತಿದ್ದಾರೆ. ಒಳ್ಳೆಯ ಕೆಲಸವನ್ನು ಮಾಡುವವರನ್ನು ಬೈಯ್ಯುವುದು, ನಿಂದಿಸುವುದೇ ಕಾಂಗ್ರೆಸ್ ನವರ ಚಾಳಿಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ಬಾಬಾ ಸಾಹೇಬ್ ಡಾ. ಅಂಬೇಡ್ಕರ್ ಅವರನ್ನು ಕೂಡ ಕಾಂಗ್ರೆಸ್ ನವರು ನಿಂದಿಸಿದರು. ಅಂಬೇಡ್ಕರ್ ಅವರನ್ನು ರಾಕ್ಷಸ, ರಾಷ್ಟ್ರದ್ರೋಹಿ ಎಂದಿದ್ದರು. ವೀರ ಸಾವರ್ಕರ್ ಅವರನ್ನೂ ನಿಂದಿಸಿದ್ದಾರೆ. ಮಹಾನ್ ವ್ಯಕ್ತಿಗಳನ್ನು ಅವಮಾನಿಸುವುದು, ನಿಂದಿಸುವುದೇ ಕಾಂಗ್ರೆಸ್ ನವರ ಕೆಲಸ. ಮಹಾ ಪುರುಷರನ್ನೇ ಕಾಂಗ್ರೆಸ್ ನವರು ನಿಂದಿಸುತ್ತಿದ್ದಾರೆ. ನನ್ನನ್ನೂ ತೆಗಳುತ್ತಿದ್ದಾರೆ. ಅವರು ಹೀಗೇ ನಿಂದಿಸುತ್ತಾ ಇರಲಿ. ನಾನು ಜನತಾ ಜನಾರ್ಧನ ಸೇವೆಯಲ್ಲಿ ನಿರತನಾಗಿರುತ್ತೇನೆ ಎಂದರು.