ಚಿಕ್ಕಮಗಳೂರು: ಮನೆಯನ್ನೇ ನಿರ್ವಹಿಸಲಾಗದವರು ರಾಜ್ಯವನ್ನು ಹೇಗೆ ನಿರ್ವಹಿಸುತ್ತಾರೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ತಿರುಗೇಟು ನೀಡಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ಮೊದಲು ಜೋಶಿಯವರು ತಮ್ಮ ಕುಟುಂಬದ ಸಮಸ್ಯೆ ಬಗೆಹರಿಸಿಕೊಳ್ಳಲಿ ಎಂದಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿಯವರಿಗೆ ತಮ್ಮ ಸಹೋದರನನ್ನೇ ನೆಟ್ಟಗೆ ಇಟ್ಟುಕೊಳ್ಳಲು ಆಗಿಲ್ಲ. ಜೊಶಿಯವರ ಕುಟುಂಬದಲ್ಲಿಯೇ ಅಸಮಾಧಾನಗಳಿವೆ. ಹೀಗಿರುವಾಗ ಅವರೇನು ನಮಗೆ ಹೇಳುವುದು? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಜೋಶಿಯವರ ಸಹೋದರ ಜೋಶಿ ಅಕ್ರಮದ ಬಗ್ಗೆ ದಾಖಲೆಗಳನ್ನು ಕೊಡುವುದಾಗಿ ಹೇಳುತ್ತಿದ್ದಾರೆ. ಕರೆ ಮಾಡಿ ಈ ಬಗ್ಗೆ ಮಾತನಾಡುತ್ತಿದ್ದಾರೆ. ಮೊದಲು ಅವರ ಕುಟುಂಬದ ಸಮಸ್ಯೆ ಬಗೆಹರಿಸಿಕೊಳ್ಳಲಿ ಎಂದು ಟಾಂಗ್ ನೀಡಿದ್ದಾರೆ.
ಜನರ ಸಮಸ್ಯೆಗೆ ಸ್ಪಂದಿಸಲು ನಮ್ಮ ಕುಟುಂಬ ಹೋರಾಟ ನಡೆಸುತ್ತಿದೆ. ರಾಮಾಯಣ, ಮಹಾಭಾರತದಲ್ಲಿಯೂ ಹೋರಾಟಗಳು ನಡೆದಿವೆ. ಇದು ನಮ್ಮ ಸಂಸ್ಕೃತಿ. ಬದಲಾಯಿಸಲು ಸಾಧ್ಯವಿಲ್ಲ. ದೇವೇಗೌಡರ ಕುಟುಂಬ ಜನರ ಸೇವೆಗಾಗಿ ಹೋರಾಡುತ್ತಿದೆ ಎಂದು ಹೇಳಿದ್ದಾರೆ.