ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ. ದೇವೆಗೌಡರ ಕುಟುಂಬ, ಪಂಚರತ್ನ ಯೋಜನೆ ಹಾಗೂ ಜೆಡಿಎಸ್ ಬಗ್ಗೆ ಟೀಕಿಸಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ದ ಕಿಡಿಕಾರಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅವನ್ಯಾರೋ ಜೋಳಿಗೆ ಇಡ್ಕೊಂಡು ಓಡಾಡೋನು ಏನೋ ಹೇಳಿದ್ದಾನೆ. ಕರ್ನಾಟಕಕ್ಕೂ ನಿನಗೂ ಏನ್ ಸಂಬಂಧ, ಕರ್ನಾಟಕಕ್ಕೆ ನಿನ್ನ ಕೊಡುಗೆ ಏನು? ಎಂದು ಪ್ರಶ್ನಿಸಿದ್ದಾರೆ.
ಬೆಂಗಳೂರುನ ಜೆ.ಪಿ. ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಮಾರಸ್ವಾಮಿ, ರಾಜ್ಯದಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಮಾಡುವವರು, ವಾಮಾಚಾರ ಮಾಡುವವರಿಂದ ಹಣ ತೆಗೆದುಕೊಂಡು ಅಪರೇಶನ್ ಕಮಲ ಮಾಡಿ ನಮ್ಮ ಸರ್ಕಾರ ತೆಗೆದಿರಿ. ಲೂಟಿ ದರೋಡೆ ಮಾಡಿ ಕರ್ನಾಟಕ ಹಣವನ್ನ ಕೊಂಡೊಯ್ದಿದ್ದೀರಾ ಎಂದು ಬಿ.ಎಲ್. ಸಂತೋಷ್ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದರು.
ನಮ್ಮ ಪಕ್ಷದ ಬಗ್ಗೆ, ಮನೆತನದ ಬಗ್ಗೆ ಲಘುವಾಗಿ ಮಾತನಾಡಬೇಡಿ. 2023ಕ್ಕೆ ನಿಮ್ಮ ಪರಿಸ್ಥಿತಿ ಏನಾಗಿರುತ್ತದೆ ಎನ್ನುವುದನ್ನು ಒಮ್ಮೆ ಊಹೆ ಮಾಡಿಕೊಳ್ಳಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಿಮ್ಮದು 40% ಸರ್ಕಾರ. ನಮ್ಮ ಬಗ್ಗೆ ಮಾತಾಡಲು ನೈತಿಕತೆ ನಿಮಗೆ ಇಲ್ಲ. ಮೋದಿ ಹೆಸರಿನಲ್ಲಿ ಹೊಟ್ಟೆಪಾಡು ನೋಡ್ಕೊಂಡಿರೋರು ನೀವು. ನಾನು ಸರಕಾರ ಮಾಡೋಣ ಎಂದು ನಿಮ್ಮ ಮನೆ ಬಾಗಿಲಿಗೆ ಬಂದಿರಲಿಲ್ಲ. ಯಾರು ಯಾರ ಮನೆ ಬಾಗಿಲಿಗೆ ಬಂದಿದ್ದರು ಎನ್ನುವುದು ರಾಜ್ಯದ ಜನತೆಗೆ ಚೆನ್ನಾಗಿ ಗೊತ್ತು. ನಮ್ಮ ಪಕ್ಷದ ಬಗ್ಗೆ ಲಘುವಾಗಿ ಮಾತಾಡ್ಬೇಡಿ ಮಿಸ್ಟರ್ ಅಶೋಕ್, ಮಿಸ್ಟರ್ ಸಂತೋಷ್ ಎಂದು ಸಂತೋಷ್ ಹಾಗೂ ಕಂದಾಯ ಸಚಿವ ಆರ್ ಅಶೋಕ್ ವಿರುದ್ಧ ವಾಗ್ದಾಳಿ ನಡೆಸಿದರು.