ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಜೆಡಿಎಸ್ ಶಾಸಕ ಗುಬ್ಬಿ ಶ್ರೀನಿವಾಸ್ ಯಾರಿಗೂ ಮತ ಹಾಕದೇ ಖಾಲಿ ಪೇಪರ್ ಹಾಕಿದ್ದಾರೆ ಎಂಬ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರೋಪಕ್ಕೆ ಕಿಡಿ ಕಾರಿರುವ ಶಾಸಕ ಶ್ರೀನಿವಾಸ್, ಮತ ಹಾಕುವಾಗ ಅವನೇನು ಕತ್ತೆ ಕಾಯುತ್ತಿದ್ನಾ ? ಬ್ಯಾಲೆಟ್ ಪೇಪರ್ ತೋರಿ ಮತಹಾಕಿದ್ದೇನೆ ಆದರೂ ಅನಗತ್ಯ ಆರೋಪ ಮಾಡುತ್ತಿದ್ದಾನೆ ಎಂದು ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಶ್ರೀನಿವಾಸ್, ಮೂರ್ನಾಲ್ಕು ನಿಮಿಷ ಪೇಪರ್ ಹಿಡಿದುಕೊಂಡಿದ್ದೇನೆ. ಅದಾದ ಮೇಲೆ ಹೋಗಿ ವೋಟ್ ಹಾಕಿದ್ದೇನೆ. ಆತ ಏನು ಕತ್ತೆ ಕಾಯುತ್ತಿದ್ನಾ ? ಹೆಬ್ಬಟ್ಟು ತೆಗಿ ಅನ್ನಬೇಕಿತ್ತು. ನನ್ನನ್ನು ಪಕ್ಷದಿಂದ ಹೊರಹಾಕಲು ಈ ರೀತಿ ನಾಟಕವಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೆಚ್.ಡಿ.ಕೆ ಯಾವುದರಲ್ಲಿ ಉತ್ತಮ ? ಬೆಳಿಗ್ಗೆ ಒಂದು ಹೇಳ್ತಾನೆ, ಸಂಜೆ ಮತ್ತೊಂದು ಹೇಳ್ತಾನೆ. ದೊಡ್ಡ ಊಸರವಳ್ಳಿಯಂತೆ ತನಗೆ ಬೇಕಾದಂತೆ ಬಣ್ಣ ಬದಲಾಯಿಸುತ್ತಾನೆ. ಕುಮಾರಸ್ವಾಮಿ ಯಾವುದರಲ್ಲಿಯೂ ಶುದ್ಧವಿಲ್ಲ, ಕಚ್ಚೆ ಸರಿಯಿಲ್ಲ, ಬಾಯಿ ಸರಿಯಿಲ್ಲ, ಈತನಿಗೆ ಇನ್ನೊಬ್ಬರ ಬಗ್ಗೆ ಮಾತನಾಡಲು ಏನು ನೈತಿಕತೆ ಇದೆ ? ಒಕ್ಕಲಿಗರನ್ನು ತುಳಿಯೋದೇ ಅವನ ಅಜೆಂಡಾ. ನಾವು ಒಳ್ಳೆ ಕಾರು, ಬಟ್ಟೆ ಹಾಕಿದರೆ ಹೆಚ್.ಡಿ.ಕೆ. ಗೆ ಸಿಟ್ಟು ಬರುತ್ತೆ. ಫಕೀರರು, ಪೇಪರ್ ಆಯೋರು ಇದ್ದಂತೆ ಇರಬೇಕು ಎಂಬುದು ಅವರ ಉದ್ದೇಶ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.