ಬೆಂಗಳೂರು: ವಾಡಿಕೆಯಂತೆ ಪ್ರತಿವರ್ಷ ಜೂನ್ ಮೊದಲ ವಾರದಲ್ಲಿ ಆರಂಭವಾಗಬೇಕಿದ್ದ ಮುಂಗಾರು ಈ ಬಾರಿ ಬೇಗನೇ ಆರಂಭವಾಗುತ್ತಿದ್ದು, ಮೇ 27ರಂದೆ ಮುಂಗಾರು ಆಗಮನವಾಗಲಿದೆ.
ಜೂನ್ 1 ಅಥವಾ ಬಳಿಕ ಕೇರಳದ ಕರಾವಳಿಗೆ ಮಾನ್ಸೂನ್ ಪ್ರವೇಶವಾಗುವುದು ವಾಡಿಕೆ. ಆದರೆ ಈಬಾರಿ ಮೇ 27ರಂದೇ ಕೇರಳಕ್ಕೆ ಮಾನ್ಸೂನ್ ಪ್ರವೇಶಿಸಲಿದ್ದು, ಬಳಿಕ ಮೂರು ದಿನಗಳಲ್ಲಿ ರಾಜ್ಯಕ್ಕೆ ಮುಂಗಾರು ಪ್ರವೇಶಿಸಲಿದೆ. ಹಾಗಾಗಿ ತಿಂಗಳಾಂತ್ಯಕ್ಕೆ ರಾಜ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರಾಜ್ಯದ ಕರಾವಳಿ ಪ್ರದೇಶವಾದ ಮಂಗಳೂರಿಗೆ ಮೊದಲು ಪ್ರವೇಶಿಸಲಿರುವ ಮುಂಗಾರು ಬಳಿಕ ಮೂರು ದಿನಗಳಲ್ಲಿ ದಕ್ಷಿಣ ಹಾಗೂ ಉತ್ತರ ಒಳನಾಡು ಪ್ರವೇಶಿಸುತ್ತದೆ. ಹೀಗಾಗಿ ಈ ಬಾರಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ.
ಇನ್ನು ಅಸನಿ ಚಂಡಮಾರುತ ಕ್ಷೀಣಿಸಿದೆಯಾದರೂ ರಾಜ್ಯದಲ್ಲಿ ಇಂದಿನಿಂದ ನಾಲ್ಕು ದಿನಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.