ಅರ್ಜೆಂಟೀನಾದ ಉಪಾಧ್ಯಕ್ಷೆ ಕ್ರಿಸ್ಟಿನಾ ಫೆರ್ನಾಂಡಿಸ್ ಡಿ ಕಿರ್ಚ್ನರ್, ಕೂದಲೆಳೆ ಅಂತರದಲ್ಲಿ ಹತ್ಯೆಯಿಂದ ಪಾರಾಗಿದ್ದಾರೆ. ದುಷ್ಕರ್ಮಿಯೊಬ್ಬ ಲೋಡ್ ಆಗಿದ್ದ ಗನ್ ಅನ್ನು ಕ್ರಿಸ್ಟಿನಾ ಕಡೆಗೆ ಗುರಿ ಮಾಡಿದ್ದ. ಆದ್ರೆ ಕೊನೆ ಕ್ಷಣದಲ್ಲಿ ಗುಂಡು ಹಾರಿಸಲು ವಿಫಲನಾಗಿದ್ದಾನೆ.
ದಾಳಿಕೋರ 35 ವರ್ಷದ ಬ್ರೆಜಿಲಿಯನ್ ವ್ಯಕ್ತಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನನ್ನು ಫರ್ನಾಂಡೋ ಆಂಡ್ರೆ ಸಬಾಗ್ ಮೊಂಟಿಯೆಲ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಉಪಾಧ್ಯಕ್ಷೆಗೆ ಯಾವುದೇ ಗಾಯಗಳಾಗಿಲ್ಲ. ಉಪಾಧ್ಯಕ್ಷೆಯ ಸಮೀಪದಲ್ಲೇ ಇದ್ದ ಮಹಿಳೆಗೆ ಟ್ರಿಗರ್ ಎಳೆದ ಸದ್ದು ಕೇಳಿತ್ತು. ಆದ್ರೆ ಅದು ಹ್ಯಾಂಡ್ ಗನ್ ಅನ್ನೋದು ಅರಿವಿಗೆ ಬಂದಿರಲಿಲ್ಲ.
ದುಷ್ಕರ್ಮಿ ಟ್ರಿಗರ್ ಎಳೆಯುವಷ್ಟರಲ್ಲಿ ಭದ್ರತಾ ಸಿಬ್ಬಂದಿ ಆತನನ್ನು ತಡೆದಿದ್ದಾರೆ. ಉಪಾಧ್ಯಕ್ಷೆಯ ಹತ್ಯೆಗೆ ಯತ್ನಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಉಪಾಧ್ಯಕ್ಷೆ ಕ್ರಿಸ್ಟಿನಾ ಬೆಂಬಲಿಗರತ್ತ ಕೈಬೀಸುತ್ತಿದ್ದರು. ಈ ವೇಳೆ ಅಲ್ಲೇ ಇದ್ದ ದುಷ್ಕರ್ಮಿ ಗನ್ ಅನ್ನು ಅವರ ತಲೆಗೇ ಗುರಿಯಿಟ್ಟಿದ್ದ. ಕ್ರಿಸ್ಟಿನಾರ ಮುಖಕ್ಕೆ ಗನ್ ಸ್ಪರ್ಷಿಸುತ್ತಿತ್ತು. ತಕ್ಷಣವೇ ಎಚ್ಚೆತ್ತುಕೊಂಡ ಭದ್ರತಾ ಸಿಬ್ಬಂದಿ ಆತನನ್ನು ತಡೆದಿದ್ದಾರೆ. ಅರ್ಜೆಂಟೀನಾ ಪ್ರಜಾಪ್ರಭುತ್ವಕ್ಕೆ ಮರಳಿದ ನಂತರ ಅತ್ಯಂತ ಗಂಭೀರವಾದ ಘಟನೆ ಇದು ಅಂತಾ ಬಣ್ಣಿಸಲಾಗ್ತಿದೆ. ರಾತ್ರಿ 9 ಗಂಟೆ ವೇಳೆಗೆ ಉಪಾಧ್ಯಕ್ಷೆ ತಮ್ಮ ನಿವಾಸದ ಹೊರಭಾಗದಲ್ಲಿ ಬೆಂಬಲಿಗರನ್ನು ಸ್ವಾಗತಿಸುತ್ತಿದ್ದಾಗ ಈ ಘಟನೆ ನಡೆದಿದೆ.
https://twitter.com/AZmilitary1/status/1565513406181941248