ನವದೆಹಲಿ: ಮಹತ್ವದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇರಳದ ವಯನಾಡು ಕ್ಷೇತ್ರ ಬಿಟ್ಟು ಮತ್ತೊಂದು ರಾಜ್ಯಕ್ಕೆ ವಲಸೆ ಹೋಗಲು ಮುಂದಾಗಿದ್ದಾರೆ.
2019 ರಲ್ಲಿ ಉತ್ತರಪ್ರದೇಶದ ಅಮೇಥಿ ಮತ್ತು ಕೇರಳದ ವಯನಾಡು ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧಿಸಿದ್ದರು. ವಯನಾಡು ಕ್ಷೇತ್ರದಲ್ಲಿ ನಾಲ್ಕು ಲಕ್ಷ ಮತಗಳ ಅಂತರದಿಂದ ಜಯಗಳಿಸಿದ್ದರು. 2024ರ ಲೋಕಸಭೆ ಚುನಾವಣೆಯಲ್ಲಿ ವಯನಾಡು ಕ್ಷೇತ್ರ ಬಿಟ್ಟು ಮತ್ತೊಂದು ಸುರಕ್ಷಿತ ಕ್ಷೇತ್ರದ ಹುಡುಕಾಟದಲ್ಲಿರುವ ರಾಹುಲ್ ಗಾಂಧಿ ಈ ಬಾರಿಯೂ ಕೂಡ ಎರಡು ಕ್ಷೇತ್ರಗಳಿಂದ ಸ್ಪರ್ಧಿಸಲಿದ್ದಾರೆ.
ಉತ್ತರಪ್ರದೇಶದ ಅಮೇಥಿ ಜೊತೆಗೆ ಕರ್ನಾಟಕ ಇಲ್ಲವೇ ತೆಲಂಗಾಣದ ಒಂದು ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧಿಸುವ ಸಾಧ್ಯತೆ ಇದೆ. ಕರ್ನಾಟಕದ ಬೆಂಗಳೂರು ಗ್ರಾಮಾಂತರ, ತೆಲಂಗಾಣದ ಮಲ್ಕಾಜ್ ಗಿರಿ ಕ್ಷೇತ್ರದಿಂದ ರಾಹುಲ್ ಗಾಂಧಿ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬೆಂಗಳೂರು ಗ್ರಾಮಾಂತರ ಕ್ಷೇತ್ರವನ್ನು ಡಿ.ಕೆ. ಸುರೇಶ್ ಪ್ರತಿನಿಧಿಸುತ್ತಿದ್ದಾರೆ. ರಾಹುಲ್ ಗಾಂಧಿ ಸ್ಪರ್ಧೆಗೆ ರಾಜ್ಯ ಕಾಂಗ್ರೆಸ್ ನಾಯಕರು ಆಹ್ವಾನ ನೀಡಿದ್ದಾರೆ ಎನ್ನಲಾಗಿದೆ. ಈ ಹಿಂದೆ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಿಂದ ಇಂದಿರಾ ಗಾಂಧಿ, ಬಳ್ಳಾರಿ ಕ್ಷೇತ್ರದಿಂದ ಸೋನಿಯಾ ಗಾಂಧಿ ಸ್ಪರ್ಧಿಸಿದ್ದರು.