ಕೀವ್: ಉಕ್ರೇನ್ ಮೇಲೆ ರಷ್ಯಾ ಯುದ್ಧ ಮುಂದುವರೆದಿದ್ದು, ಈ ನಡುವೆ ಹಲವು ದೇಶಗಳು ಉಕ್ರೇನ್ ಗೆ ಆರ್ಥಿಕ ಹಾಗೂ ಶಸ್ತ್ರಾಸ್ತ್ರ ನೆರವು ನೀಡಲು ಮುಂದಾಗಿವೆ. ಅಮೆರಿಕ, ಫ್ರಾನ್ಸ್ ಬಳಿಕ ಇದೀಗ ನೆದರ್ ಲ್ಯಾಂಡ್ ಕೂಡ ಉಕ್ರೇನ್ ಗೆ ನೆರವು ನೀಡುವುದಾಗಿ ಘೋಷಿಸಿದೆ.
ರಷ್ಯಾ ದಾಳಿಗೆ ತತ್ತರಿಸಿರುವ ಉಕ್ರೇನ್ ಗೆ 600 ಮಿಲಿಯನ್ ಡಾಲರ್ ಆರ್ಥಿಕ ನೆರವು ನೀಡುವುದಾಗಿ ಯುಎಸ್ ಅಧ್ಯಕ್ಷ ಜೋ ಬೈಡನ್ ಘೋಷಿಸಿದ್ದರು. ಅದರಲ್ಲಿ ತಕ್ಷಣದ ಸಹಾಯವಾಗಿ 350 ಮಿಲಿಯನ್ ಡಾಲರ್ ಮಂಜೂರು ಮಾಡಲಾಗಿದೆ ಎಂದು ಪ್ರಕಟಿಸಿದ್ದರು. ಇದರ ಬೆನ್ನಲ್ಲೇ ಇದೀಗ ನೆದರ್ ಲ್ಯಾಂಡ್ ಕೂಡ ಭದ್ರತಾ ಸಹಾಯ ಮಾಡುವುದಾಗಿ ತಿಳಿಸಿದೆ.
ನೆದರ್ ಲ್ಯಾಂಡ್ ನಿಂದ ಶೀಘ್ರದಲ್ಲಿಯೇ 200 ಏರ್ ಡಿಫೆನ್ಸ್ ರಾಕೆಟ್ ಗಳನ್ನು ಉಕ್ರೇನ್ ಗೆ ಪೂರೈಸಲಾಗುವುದು. ಭದ್ರತಾ ದೃಷ್ಟಿಯಿಂದ ಉಕ್ರೇನ್ ಪಶ್ಚಿಮ ನಗರದಲ್ಲಿರುವ ಡಚ್ ರಾಯಭಾರ ಕಚೇರಿಯ ಸಿಬ್ಬಂದಿಗಳನ್ನು ಪೊಲ್ಯಾಂಡ್ ಗಡಿಯಲ್ಲಿನ ಜರೋಸ್ಲಾವ್ ಗೆ ಸ್ಥಳಾಂತರ ಮಾಡುವುದಾಗಿಯೂ ತಿಳಿಸಿದೆ.