ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಎಂಟು ತಿಂಗಳ ಹೆಣ್ಣು ಮಗು ಸೇರಿದಂತೆ ಭಾರತೀಯ ಮೂಲದ ಸಿಖ್ ಕುಟುಂಬವನ್ನ ಅಪಹರಿಸಿ ಹತ್ಯೆ ಮಾಡಲಾಗಿದೆ. ವಾರದ ಆರಂಭದಲ್ಲಿ ಇವರನ್ನೆಲ್ಲ ಅಪಹರಿಸಲಾಗಿತ್ತು. ಸಿಖ್ ಕುಟುಂಬದ ಎಲ್ಲಾ ನಾಲ್ವರು ಸದಸ್ಯರು ಹಣ್ಣಿನ ತೋಟದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಪಂಜಾಬ್‌ನ ಹೋಶಿಯಾರ್‌ಪುರ ಮೂಲದ ಕುಟುಂಬ ಇದು. ಅಕ್ಟೋಬರ್ 3ರಂದು ಕ್ಯಾಲಿಫೋರ್ನಿಯಾದ ಮರ್ಸಿಡ್ ಕೌಂಟಿಯಲ್ಲಿ ಇವರನ್ನು ಕಿಡ್ನಾಪ್ ಮಾಡಲಾಗಿತ್ತು. ಈ ಕೃತ್ಯ ಎಸಗಿದ್ದಾನೆಂಬ ಶಂಕೆ ಮೇರೆಗೆ ಜೀಸಸ್ ಮ್ಯಾನುಯೆಲ್ ಸಲ್ಗಾಡೊ ಎಂಬಾತನನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಆತ ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾನೆ.
36 ವರ್ಷದ ಜಸ್‌ದೀಪ್ ಸಿಂಗ್, 27 ವರ್ಷದ ಜಸ್ಲೀನ್ ಕೌರ್, ದಂಪತಿಯ 8 ತಿಂಗಳ ಮಗು ಅರೋಹಿ ಧೇರಿ ಮತ್ತು ಮಗುವಿನ ಚಿಕ್ಕಪ್ಪ 39 ವರ್ಷದ ಅಮನ್‌ದೀಪ್ ಸಿಂಗ್ ಅವರ ಶವಗಳು ಬುಧವಾರ ಪತ್ತೆಯಾಗಿವೆ. ಇಂಡಿಯಾನಾ ರಸ್ತೆ ಮತ್ತು ಹಚಿನ್ಸನ್ ರಸ್ತೆ ಬಳಿಯ ಹಣ್ಣಿನ ತೋಟದಲ್ಲಿ ಶವಗಳನ್ನು ಕಾರ್ಮಿಕರೊಬ್ಬರು ನೋಡಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ರು.
ಈ ಭಯಾನಕ ಕೃತ್ಯವನ್ನು ಉತ್ತರ ಅಮೆರಿಕಾದ ಪಂಜಾಬಿ ಅಸೋಸಿಯೇಷನ್ ತೀವ್ರವಾಗಿ ಖಂಡಿಸಿದೆ. ಅಮೆರಿಕದಲ್ಲಿ ಸಿಖ್ ಸಮುದಾಯದವರ ಮೇಲೆ ಹಲ್ಲೆ, ಹತ್ಯೆಗಳು ಸೇರಿದಂತೆ ಪ್ರತಿನಿತ್ಯ ಅಪರಾಧಗಳಾಗುತ್ತಿವೆ ಎಂದು ಆಕ್ರೋಶ ಹೊರಹಾಕಿದೆ. ಘಟನೆ ಬಗ್ಗೆ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕೂಡ ದುಃಖ ವ್ಯಕ್ತಪಡಿಸಿದ್ದಾರೆ. ಉನ್ನತ ಮಟ್ಟದ ತನಿಖೆ ನಡೆಸುವಂತೆ ಕೇಂದ್ರ ವಿದೇಶಾಂಗ ಸಚಿವರಿಗೆ ಮನವಿ ಮಾಡಿದ್ದಾರೆ.
ಮರ್ಸಿಡ್ ಕೌಂಟಿ ಶೆರಿಫ್ ಕಚೇರಿಯು ಸಿಖ್ ಕುಟುಂಬವನ್ನು ಅಪಹರಿಸಿದ ಕ್ಷಣವನ್ನು ತೋರಿಸುವ ವಿಡಿಯೊವನ್ನು ಸಹ ಬಿಡುಗಡೆ ಮಾಡಿತು. ಹಣಕ್ಕಾಗಿ ಇವರನ್ನೆಲ್ಲ ಅಪಹರಿಸಿ ಕೊಲ್ಲಲಾಗಿದೆ ಅಂತಾ ಹೇಳಲಾಗ್ತಿದೆ. ಅಪಹರಣದ ನಂತರ ಅವರ ಎಟಿಎಂ ಕಾರ್ಡ್‌ಗಳನ್ನು ಬಳಸಲಾಗಿದೆ. 48 ವರ್ಷದ ಶಂಕಿತ ಸಲ್ಗಾಡಿನನ್ನು ಮಂಗಳವಾರ ವಶಕ್ಕೆ ಪಡೆಯಲಾಯ್ತು. ಆತ ತಾನೇ ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾನೆ. ಆದರೆ ಅದಕ್ಕೆ ಕಾರಣವೇನು ಎಂಬುದು ಮಾತ್ರ ಬಹಿರಂಗವಾಗಿಲ್ಲ.