ಅಮೆರಿಕ ಪ್ರವಾಸದಲ್ಲಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೂತನ ಸಂಸತ್ ಭವನ ಹಾಗೂ ಸೆಂಗೋಲ್ ಅನ್ನು ಅವಮಾನಿಸಿದ್ದಾರೆ. “ಹೊಸ ಸಂಸತ್ ಭವನ ಮತ್ತು ಸೆಂಗೋಲ್ (ರಾಜದಂಡ) ಸ್ಥಾಪನೆ ಜನರನ್ನು ದಿಕ್ಕು ತಪ್ಪಿಸುವ ನಾಟಕವಷ್ಟೇ. ಬಿಜೆಪಿ ದೇಶದ ನೈಜ ಸಮಸ್ಯೆಗಳಾದ ನಿರುದ್ಯೋಗ, ಬೆಲೆ ಏರಿಕೆ ಮತ್ತು ಕುಸಿಯುತ್ತಿರುವ ಶಿಕ್ಷಣದ ಮೌಲ್ಯದ ಬಗ್ಗೆ ಗಮನಹರಿಸುತ್ತಿಲ್ಲ. ಈ ವ್ಯವಸ್ಥೆಯಲ್ಲಿ ಮುಸ್ಲಿಮರು, ಸಿಖ್ಖರು, ಕ್ರಿಶ್ಚಿಯನ್ನರು ಮತ್ತು ದಲಿತರಂತಹ ಸಮುದಾಯಗಳು ಕೋಪ ಮತ್ತು ದ್ವೇಷದ ಹರಡುವಿಕೆಯಿಂದಾಗಿ ಆಕ್ರಮಣಕ್ಕೆ ಒಳಗಾಗುತ್ತಿದ್ದಾರೆʼʼ ಎಂದು ರಾಹುಲ್ ಗಾಂಧಿ ಅಮೆರಿಕದಲ್ಲಿ
ಪ್ರಧಾನಿ ಮೋದಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ರು. “ಭಾರತದಲ್ಲಿ ಕೆಲವೇ ಜನರು ತಮಗೇ ಎಲ್ಲವೂ ತಿಳಿದಿದೆ ಎಂದುಕೊಂಡಿದ್ದಾರೆ, ಬೇರೆಯವರ ಮಾತನ್ನವರು ಕೇಳುವುದಿಲ್ಲ. ಅವರು ಇತಿಹಾಸವನ್ನು ಇತಿಹಾಸಕಾರರಿಗೆ, ವಿಜ್ಞಾನವನ್ನು ವಿಜ್ಞಾನಿಗಳಿಗೆ ಮತ್ತು ಯುದ್ಧವನ್ನು ಸೈನ್ಯಕ್ಕೆ ವಿವರಿಸಬಹುದು ಎಂದು ಅವರು ಭಾವಿಸುತ್ತಾರೆ. ಆದರೆ ಅದರ ತಿರುಳು ಸಾಧಾರಣ, ಕೇಳಲು ಅವರು ಸಿದ್ಧರಿಲ್ಲ” ಎಂದು ರಾಹುಲ್ ಗಾಂಧಿ ಕಿಡಿಕಾರಿದ್ರು. ಈ ವೇಳೆ ರಾಹುಲ್ ಮಾಧ್ಯಮಗಳ ವಿರುದ್ಧ ಕೂಡ ಅಸಮಾಧಾನ ಹೊರಹಾಕಿದ್ದಾರೆ. ಮಾಧ್ಯಮಗಳು ತೋರಿಸುತ್ತಿರುವ ಭಾರತ ನೈಜವಲ್ಲ, ಮಾಧ್ಯಮಗಳು ಬಿಜೆಪಿಯ ಹಿತಾಸಕ್ತಿಗಾಗಿ ನಿರ್ದಿಷ್ಟ ನಿರೂಪಣೆಯನ್ನು ಬಿಂಬಿಸುತ್ತವೆ ಎಂದು ಆರೋಪ ಮಾಡಿದ್ರು.
ರಾಹುಲ್ ಗಾಂಧಿ, ಮೇ 30 ಅಮೆರಿಕಕ್ಕೆ ಆಗಮಿಸಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋದಿಂದ ತಮ್ಮ ಪ್ರವಾಸವನ್ನು ಪ್ರಾರಂಭಿಸಿದ ಕಾಂಗ್ರೆಸ್ ಯುವರಾಜ, ವಾಷಿಂಗ್ಟನ್ DC ಮತ್ತು ನ್ಯೂಯಾರ್ಕ್ ಗೂ ಭೇಟಿ ಕೊಡ್ತಿದ್ದಾರೆ. ಜೂನ್ 4 ರಂದು ನ್ಯೂಯಾರ್ಕ್‌ನಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ನ್ಯೂಯಾರ್ಕ್‌ನ ಜಾವಿಟ್ಸ್ ಸೆಂಟರ್‌ನಲ್ಲಿ ಸಂವಾದ ಏರ್ಪಡಿಸಲಾಗಿದೆ. ಈ ಹಿಂದೆ ರಾಹುಲ್ ಗಾಂಧಿ ಬ್ರಿಟನ್‌ಗೆ ಭೇಟಿ ನೀಡಿದ್ದಾಗಲೂ ಭಾರತಕ್ಕೆ ಸಂಬಂಧಪಟ್ಟಂತೆ ದೊಡ್ಡ ವಿವಾದವನ್ನೇ ಹುಟ್ಟುಹಾಕಿದ್ದರು. ಭಾರತೀಯ ಪ್ರಜಾಪ್ರಭುತ್ವವು ಅಪಾಯದಲ್ಲಿದೆ ಎಂದು ಹೇಳಿದ್ದರು.