ಇನ್ಮೇಲೆ ಅಮೆಜಾನ್ ಪ್ರೈಮ್ ವಿಡಿಯೋವನ್ನು ಮೊಬೈಲ್‌ನಲ್ಲೇ ವೀಕ್ಷಿಸಬಹುದು. ಪ್ರೈಮ್ ವಿಡಿಯೋದ ಮೊಬೈಲ್ ಆವೃತ್ತಿಯನ್ನು ಅಮೆಜಾನ್ ಗ್ರಾಹಕರ ಕೈಗೆಟುಕುವ ದರದಲ್ಲಿ ಬಿಡುಗಡೆ ಮಾಡಿದೆ. ಭಾರತದೆಲ್ಲೆಡೆ ಈ ಆವೃತ್ತಿ ಲಭ್ಯವಿದೆ.
ಕಳೆದ ವರ್ಷ ಏರ್ಟೆಲ್ ಸಹಭಾಗಿತ್ವದಲ್ಲಿ ಏರ್‌ಟೆಲ್ ಚಂದಾದಾರರಿಗಾಗಿ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಯನ್ನು ಮೊದಲ ಬಾರಿಗೆ ಪರಿಚಯಿಸಲಾಗಿತ್ತು. ಇಂದಿನಿಂದ ಭಾರತದಲ್ಲಿನ ಎಲ್ಲಾ ಗ್ರಾಹಕರಿಗೆ ಯೋಜನೆಗೆ ಪ್ರವೇಶವನ್ನು ವಿಸ್ತರಿಸಿದೆ. ಬೇಕಾದಲ್ಲಿ ಗ್ರಾಹಕರು ಮೊಬೈಲ್-ಮಾತ್ರ ಅನುಕೂಲವಾಗುವಂತೆ ಅಮೆಜಾನ್ ಪ್ರೈಮ್ ವೀಡಿಯೊಗೆ ಚಂದಾದಾರರಾಗಬಹುದು.
ಇದಕ್ಕೆ ಚಂದಾದಾರರಾಗಲು ಗ್ರಾಹಕರು ವರ್ಷಕ್ಕೆ 599 ರೂಪಾಯಿ ಪಾವತಿಸಬೇಕು. ಮೊಬೈಲ್ ಆವೃತ್ತಿಯು ಕೇವಲ ಒಬ್ಬ ಬಳಕೆದಾರರಿಗೆ ಪ್ರವೇಶವನ್ನು ನೀಡುತ್ತದೆ. ಅಮೆಜಾನ್ ಪ್ರಕಾರ ಒಂದು ಸ್ಮಾರ್ಟ್‌ಫೋನ್‌ಗೆ ಮಾತ್ರ ಲಭ್ಯವಿರುತ್ತದೆ. ಈ ಸೇವೆಯಲ್ಲಿ ಲಭ್ಯವಿರುವ ಎಲ್ಲಾ ವೀಡಿಯೊಗಳಿಗೆ ಚಂದಾದಾರರು ಒಂದೇ ಸ್ಮಾರ್ಟ್‌ಫೋನ್‌ನಲ್ಲಿ ಪ್ರವೇಶವನ್ನು ಹೊಂದಿರುತ್ತಾರೆ. ಸೇವೆಯು ಒಂದೇ ಬಳಕೆದಾರರಿಗೆ ಲಭ್ಯವಿರುತ್ತದೆ.
Amazon Prime ಚಂದಾದಾರಿಕೆಯೊಂದಿಗೆ ಬರುವ ಸಂಪೂರ್ಣ ಪ್ರೈಮ್ ವೀಡಿಯೊ ಅನುಭವದಂತೆ, ಬಳಕೆದಾರರು ಬಹು ಪ್ರೊಫೈಲ್‌ಗಳಿಗೆ ಪ್ರವೇಶವನ್ನು ಹೊಂದಿರುವುದಿಲ್ಲ. ಕಂಪ್ಯೂಟರ್‌ಗಳು ಅಥವಾ ಸ್ಮಾರ್ಟ್ ಟಿವಿಗಳಲ್ಲಿ 4K ರೆಸಲ್ಯೂಶನ್‌ನಲ್ಲಿ ವಿಡಿಯೋ ಸ್ಟ್ರೀಮ್ ಮಾಡಲು ಸಾಧ್ಯವಿಲ್ಲ.
ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಗೆ ವಾರ್ಷಿಕ ಚಂದಾದಾರಿಕೆಯನ್ನು ಖರೀದಿಸಲು ಗ್ರಾಹಕರು ಆಂಡ್ರಾಯ್ಡ್‌ನಲ್ಲಿನ ಪ್ರೈಮ್ ವಿಡಿಯೋ ಅಪ್ಲಿಕೇಶನ್ ಮೂಲಕ ಸೈನ್ ಅಪ್ ಮಾಡಬಹುದು. ಅಥವಾ ಪ್ರೈಮ್ ವಿಡಿಯೋ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಸಂಪೂರ್ಣ ಪ್ರೈಮ್ ವಿಡಿಯೋ ಅನುಭವಕ್ಕಾಗಿ 1499 ರೂಪಾಯಿ ಪ್ಲಾನ್ ಕೂಡ ಇದೆ.
ಏರ್ಟೆಲ್ ಜೊತೆಗಿನ ಸಹಭಾಗಿತ್ವದಲ್ಲಿ 89 ರೂಪಾಯಿ ರೀಚಾರ್ಜ್ ಮೇಲೆ 28 ದಿನಗಳವರೆಗೆ 6GB ಡೇಟಾ, ಪ್ರೈಮ್ ವಿಡಿಯೋಗೆ ಆಕ್ಸೆಸ್ ಆಪ್ಷನ್ ಇತ್ತು. ಏರ್‌ಟೆಲ್ ಚಂದಾದಾರಿಗೆ 299 ರೂಪಾಯಿ ಯೋಜನೆ ಅಡಿ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿಗೆ ಪ್ರವೇಶದ ಜೊತೆಗೆ 28 ದಿನಗಳವರೆಗೆ ಪ್ರತಿದಿನ 1.5GB ಡೇಟಾ ನೀಡಲಾಗುತ್ತಿತ್ತು. ನೆಟ್‌ಫ್ಲಿಕ್ಸ್, ವೂಟ್ ಮತ್ತು ಡಿಸ್ನಿ + ಹಾಟ್‌ಸ್ಟಾರ್‌ನಂತಹ ಇತರ ಸ್ಟ್ರೀಮಿಂಗ್ ಸೇವೆಗಳೊಂದಿಗೆ ಸ್ಪರ್ಧಿಸುವ ಮೂಲಕ ಅಮೆಜಾನ್ ಭಾರತದಲ್ಲಿ ತನ್ನ ಬೆಳವಣಿಗೆಯನ್ನು ವೇಗಗೊಳಿಸಲು ಮುಂದಾಗಿದೆ.
ಪ್ರೈಮ್ ವಿಡಿಯೋದ ಮೊಬೈಲ್ ಆವೃತ್ತಿ ಮೂಲಕ ನೆಟ್‌ಫ್ಲಿಕ್ಸ್‌ಗೆ ಪೈಪೋಟಿ ನೀಡುವುದು ಪಕ್ಕಾ ಎನ್ನಲಾಗ್ತಿದೆ. ಪ್ರೈಮ್ ವಿಡಿಯೋದ ಮೊಬೈಲ್ ಆವೃತ್ತಿ ಈಗಾಗ್ಲೇ ಲ್ಯಾಟಿನ್ ಅಮೇರಿಕಾ ಮತ್ತು ಆಗ್ನೇಯ ಏಷ್ಯಾದ ಅನೇಕ ದೇಶಗಳಲ್ಲಿತ್ತು. ಇದೀಗ ಭಾರತದಲ್ಲೂ ಲಭ್ಯವಾಗಿದೆ. ಹೊಸ ಪ್ರೈಮ್ ವಿಡಿಯೋ ಮೊಬೈಲ್ ಆವೃತ್ತಿ ವಾರ್ಷಿಕ ಯೋಜನೆಯು ಬೆಳವಣಿಗೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಭಾರತದಲ್ಲಿ ವ್ಯಾಪಾರ ಮತ್ತು ಸೇವೆಯಲ್ಲಿ ಗುಣಮಟ್ಟ ಸುಧಾರಣೆಗೂ ಸಹಕಾರಿ ಎಂದು ಅಮೇಜಾನ್ ಹೇಳಿಕೊಂಡಿದೆ. ಮನರಂಜನೆ ಮತ್ತು ಲೈವ್ ಕ್ರೀಡೆಗಳೊಂದಿಗೆ ಪ್ರತಿಯೊಬ್ಬ ಭಾರತೀಯರನ್ನು ರಂಜಿಸಲು ಕಾತರರಾಗಿದ್ದೇವೆ ಎಂದು ಅಮೇಜಾನ್ ಅಧಿಕಾರಿಗಳು ತಿಳಿಸಿದ್ದಾರೆ.